ಬಿಜೆಪಿಯೊಳಗಿನ ಎಲ್ಲ ಗೊಂದಲಗಳಿಗೆ ನಾಳೆ ತೆರೆ ಬೀಳಲಿದೆ : ಬಿ.ಎಸ್.ಯಡಿಯೂರಪ್ಪ – vishwanews24
ಆಡಳಿತ ಪಕ್ಷವನ್ನು ಎದುರಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ : ಬಿ.ಎಸ್.ಯಡಿಯೂರಪ್ಪ
ಶಿವಮೊಗ್ಗ: ಬಿಜೆಪಿಯೊಳಗಿನ ಎಲ್ಲ ಗೊಂದಲಗಳಿಗೆ ನಾಳೆ ತೆರೆ ಬೀಳಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ವಿನೋಬನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾಳೆ ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಶಾಸಕ ಯತ್ನಾಳ್ ಅವರ ಬಗ್ಗೆ ಚರ್ಚೆ ನಡೆಯುವ ಕುರಿತು ನನಗೆ ಮಾಹಿತಿ ಇಲ್ಲ. ಆಡಳಿತ ಪಕ್ಷವನ್ನು ಎದುರಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ. ಇದನ್ನು ಯತ್ನಾಳ್ ಅವರೂ ಒಪ್ಪಿಕೊಳ್ಳುತ್ತಾರೆ ಎಂದರು.
ಮನುಷ್ಯನ ಸ್ವಭಾವದ ವೀಕ್ನೆಸ್ ಎಲ್ಲರಿಗೂ ಇರುತ್ತದೆ. ಯತ್ನಾಳ್ ನನ್ನ ಹಾಗೂ ನಮ್ಮ ಪುತ್ರರನ್ನು ಟಾರ್ಗೆಟ್ ಮಾಡುತ್ತಿರಬಹುದು. ಆ ಬಗ್ಗೆ ನನಗೇನೂ ಅಭ್ಯಂತರ ಇಲ್ಲ. ಆದರೆ, ನನ್ನ ಉದ್ದೇಶ ನಾವೆಲ್ಲ ಒಟ್ಟಾಗಿ ಹೋಗಬೇಕೆಂಬುದಾಗಿದೆ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವೇ ಹೊರತು, ನಾವು ನಾವೇ ಬಡದಾಡಿಕೊಳ್ಳುವುದಲ್ಲ. ಇದು ಹೆಚ್ಚು ಶಕ್ತಿಯನ್ನು ನೀಡುವುದಿಲ್ಲ. ಅದಕ್ಕಾಗಿ ಎಲ್ಲವನ್ನೂ ಮರೆತು ಒಟ್ಟಾಗಿ ಹೋಗಬೇಕು. ಅಧಿವೇಶನವನ್ನು ಯಾವುದೇ ಗೊಂದಲವಿಲ್ಲದೆ ನಾವೆಲ್ಲ ಒಟ್ಟಾಗಿ ಎದುರಿಸುತ್ತೇವೆ. ಸರ್ಕಾರದ ಹಗರಣಗಳನ್ನು ಬಯಲು ಮಾಡಿ ರಾಜ್ಯದ ಜನರಿಗೆ ನ್ಯಾಯ ಕೊಡಿಸುತ್ತೇವೆ. ಈಗಾಗಲೇ ಇ.ಡಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ. ಇವೆಲ್ಲವೂ ಮುಂಬರುವ ದಿನಗಳಲ್ಲಿ ಚರ್ಚೆ ಆಗಲಿದೆ ಎಂದು ಹೇಳಿದರು.
