ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ ದಿನ ಸರ್ಕಾರ ನಡೆಯುವುದಿಲ್ಲ ,ಸರ್ಕಾರ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ : ಬಸವರಾಜ ಹೊರಟ್ಟಿ -Vishwanews24
ಹುಬ್ಬಳ್ಳಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ, ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ ದಿನ ಸರ್ಕಾರ ನಡೆಯುವುದಿಲ್ಲ , ಸರ್ಕಾರ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅತೃಪ್ತ ಶಾಸಕರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಅತೃಪ್ತರನ್ನು ನಿಭಾಯಿಸುವುದು ಯಡಿಯೂರಪ್ಪಗೆ ಬಹಳ ಕಷ್ಟವಾಗುತ್ತದೆ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರದ ಮೋದಿ ಸರ್ಕಾರ ಪರಿಶೀಲನೆ ನಡೆಸಬೇಕಾಗಿತ್ತು. ಬಿಎಸ್ ವೈ ಸರ್ಕಾರಕ್ಕೆ ತುಂಬಾ ದಿನ ಆಯುಷ್ಯ ಇಲ್ಲ ಎಂದು ಭವಿಷ್ಯ ನುಡಿದರು.
ಕುಮಾರಸ್ವಾಮಿ ಅವರಿಗೆ ತಾಳ್ಮೆ ಇತ್ತು. ಆದರೆ, ಆ ತಾಳ್ಮೆ ಬಿ.ಎಸ್. ಯಡಿಯೂರಪ್ಪಗೆ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೂ ತುಂಬಾ ದಿನ ನಡೆಯುವುದಿಲ್ಲ. ಸರ್ಕಾರ ಮಾಡೋದು ಅಷ್ಟೋಂದು ಸುಲಭದ ಕೆಲಸವಲ್ಲ ಎಂದರು.
ಅತೃಪ್ತ ಮೂರು ಶಾಸಕರನ್ನು ಅನರ್ಹ ಮಾಡಿದ್ದು, ಸರಿಯಾದ ಕ್ರಮ. ಸ್ಪೀಕರ್ ರಮೇಶ್ ಕುಮಾರ್ ಬಹಳ ವಿಚಾರಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ. ಇಂದು ಕಾಂಗ್ರೆಸ್ ಬಿಟ್ಟವರು ನಾಳೆ ಬಿಜೆಪಿ ಬಿಡಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರದಲ್ಲಿ ಬಹಳ ಜನ ಟ್ರಬಲ್ ಶೂಟರ್ ಇದ್ದರು. ಆದರೆ ಬಿಜೆಪಿಯಲ್ಲಿ ಟ್ರಬಲ್ ಕ್ರಿಯೇಟರ್ ಇದ್ದಾರೆ. ಈ ಸರ್ಕಾರ ಬಹಳ ದಿನ ಇರಲಾರದು ಎಂದು ಹೇಳಿದರು.

