ಬಿಜೆಪಿ-ಆರೆಸ್ಸೆಸ್ ನಡುವಿನ ತಿಕ್ಕಾಟದಿಂದಾಗಿ ನಳಿನ್ ಕುಮಾರ್ ಗೆ ಡಮ್ಮಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ :ಐವನ್ ಡಿಸೋಜ -Vishwanews24
ಮಂಗಳೂರು: ತಮ್ಮ ವಿರೋಧಿಗಳ ನಡುವೆ ರಾಜಕೀಯವಾಗಿ ಹುಳಿ ಹಿಂಡುವ ಕೆಲಸವನ್ನು ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಿವಿಮಾತು ಹೇಳಿದ್ದಾರೆ.

ಡಿಕೆಶಿ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡ ಇದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ತಿರುಗೇಟು ನೀಡಿರುವ ಐವನ್ ಡಿಸೋಜ, ತಮ್ಮ ಮಾತಿನ ಮೇಲೆ ನಳಿನ್ ಹಿಡಿತವಿಟ್ಟು ಮಾತನಾಡಲಿ. ನಿಮ್ಮ ಪಕ್ಷದವರು ಒಂದು ನಿಲುವನ್ನು ತೆಗೆದುಕೊಳ್ಳಲಿ. ಆ ಮೇಲೆ ಬೇರೆಯವರು ಏನು ಮಾತನಾಡುತ್ತಾರೆ ಅನ್ನುವದನ್ನು ಯೋಚಿಸಿ ಎಂದು ದೂರಿದ್ದಾರೆ.
ನಳಿನ್ ಅವರು ಹಾಗೆ ಹೇಳುವ ಮೊದಲು ಅದಕ್ಕೆ ಅವರಲ್ಲಿ ಏನು ಆಧಾರ ಇದೆ ಎಂಬುದನ್ನು ಬಹಿರಂಗಪಡಿಸಲಿ. ಅದು ಬಿಟ್ಟು ತಮ್ಮ ವಿರೋಧಿಗಳ ನಡುವೆ ರಾಜಕೀಯವಾಗಿ ಹುಳಿ ಹಿಂಡುವ ಕೆಲಸವನ್ನು ಮಾಡಬಾರದು ಎಂದು ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ಗೆ ಬಿಜೆಪಿ-ಆರೆಸ್ಸೆಸ್ ನಡುವಿನ ತಿಕ್ಕಾಟದಿಂದಾಗಿ ಡಮ್ಮಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ. ನಳಿನ್ ಸ್ಥಾನಮಾನ ಏನೆಂಬುದು ಕರಾವಳಿ ಜನರಿಗೆ ಗೊತ್ತಿದೆ. ಅದನ್ನು ಅವರು ಈಗ ರಾಜ್ಯಮಟ್ಟದಲ್ಲಿ ತೋರಿಸುತ್ತಿದ್ದಾರೆ. ಅವರು ಬಾಯಿ ಬಿಟ್ಟಷ್ಟು ಬಿಜೆಪಿಗೆ ಹಾನಿ. ಜಿಲ್ಲೆಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿದ ಸಂಸದರು ಇವರು. ಆದ್ದರಿಂದ ಯಾರ ಮೇಲಾದರೂ ಆರೋಪ ಮಾಡುವಾಗ ಎಚ್ಚರ ವಹಿಸಿ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
