ಬಿಜೆಪಿ ಎಷ್ಟು ದಿನ ಆಡಳಿತ ನಡೆಸುತ್ತದೆ ನೋಡೋಣ : ಸಿದ್ದರಾಮಯ್ಯ -Vishwanews24
ಮೈಸೂರು: ‘ಈಗಿನ ಪರಿಸ್ಥಿತಿ ನೋಡಿದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಟೇಕಾಫ್ ಆಗುವುದು ಕಷ್ಟ. ಈ ಸರ್ಕಾರ ಮೂರೂವರೆ ವರ್ಷ ಪೂರೈಸುವುದಿಲ್ಲ. ಡಿಸೆಂಬರ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
‘ಅಧಿಕಾರದ ಆಸೆಗೆ ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರನ್ನು ನಂಬಿಕೊಂಡು ಬಿಜೆಪಿ ಎಷ್ಟು ದಿನ ಆಡಳಿತ ನಡೆಸುತ್ತದೆ ನೋಡೋಣ. ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಮಂತ್ರಿಗಳು ಇನ್ನೂ ಕೆಲಸ ಆರಂಭಿಸಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ’ ಎಂದು ಮೈಸೂರಿನಲ್ಲಿ ಭಾನುವಾರ ವಾಗ್ದಾಳಿ ನಡೆಸಿದರು.
ರಾಜಕೀಯ ಮೌಲ್ಯ, ತತ್ವಾದರ್ಶಗಳೇ ಇಲ್ಲದವರು ಸರ್ಕಾರ ರಚನೆ ಮಾಡಿದರೆ ಅಂತಹ ಸರ್ಕಾರ ಸ್ಥಿರವಾಗಿರಲು ಸಾಧ್ಯವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ನೂತನ ಸರ್ಕಾರ ರಚನೆಯಾಗಿ ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಿಸಿದ್ದು, ಸಿಎಂ ಯಡಿಯೂರಪ್ಪ ಅದನ್ನು ಶಮನ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ’ ಎಂದು ವಾಗ್ಧಾಳಿ ನಡೆಸಿದರು.
ನಿನ್ನೆ ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಉಪಚುನಾವಣೆಗೆ ತಯಾರಾಗಿದ್ದೇವೆ, ಮಧ್ಯಂತರ ಚುನಾವಣೆಗೂ ತಯಾರಾಗಿ ಎಂದು ನಮ್ಮ ಕಾರ್ಯಕರ್ತರಿಗೆ ತಿಳಿಸಿದ್ದರು. ಅಲ್ಲದೇ ಈ ಸರ್ಕಾರ ನೋಡಿದ್ರೆ ಹೆಚ್ಚು ದಿನ ನಿಲ್ಲುವ ಹಾಗೆ ಕಾಣುತ್ತಿಲ್ಲ, ಅದಕ್ಕೆ ಡಿಸೆಂಬರ್ಗೆ ಸಾರ್ವತ್ರಿಕ ಚುನಾವಣೆ ಬರುತ್ತೆ, ಸಿದ್ಧರಾಗಿ ಎಂದಿದ್ದರು.
