ಬಿಜೆಪಿ ಎಷ್ಟೇ ಹುಳಿ ಹಿಂಡಿದ್ರು, ನನ್ನ ಡಿಕೆ ಶಿ ಹಾಲು ಜೇನಿನಂತ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ – vishwanews24

Featured, ರಾಜ್ಯ ನ್ಯೂಸ್

ಬಿಜೆಪಿ ಎಷ್ಟೇ ಹುಳಿ ಹಿಂಡಿದ್ರು, ನನ್ನ ಡಿಕೆ ಶಿವಕುಮಾರ್ ಹಾಲು ಜೇನಿನಂತ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪ ‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ.

ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ.‌

ಇದನ್ನೂ ಓದಿ 👇:

ಪ್ರೀತಿ ನಿರಾಕರಣೆ : ಒಮನ್ ನಲ್ಲಿ ಆತ್ಮಹತ್ಯೆಗೆ ಶರಣಾದ ಉಳ್ಳಾಲದ ಯುವಕ  – vishwanews24

ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲಿ ಕೂಡಾ ಗುಪ್ತಚರ ವಿಭಾಗ ಮುಖ್ಯಮಂತ್ರಿಯವರ ಬಳಿಯೇ ಇತ್ತು. ಅವರ ಹೇಳಿಕೆಗಳನ್ನು ಗಮನಿಸಿದರೆ ಇವರಿಬ್ಬರೂ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡುತ್ತಿರುವಂತೆ ಕಾಣಿಸುತ್ತಿದೆ.

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಧಾನಿ ಎದುರು ಬಾಯಿ ಬಿಡಲಾಗದೆ ಕೈಕಾಲು ನಡುಗುವಂತಹ ಸ‍್ಥಿತಿ ಇರುವ ಬಿಜೆಪಿಯೂ ಅಲ್ಲ, ಏಕ ಕುಟುಂಬದ ಅಧಿಪತ್ಯ ಇರುವ ಜೆಡಿಎಸ್ ಕೂಡಾ ಅಲ್ಲ. ನಮ್ಮ ಶಾಸಕರಲ್ಲಿ ಯಾರೂ ಕೂಡಾ ನನ್ನ ಇಲ್ಲವೇ ಡಿ.ಕೆ.ಶಿವಕುಮಾರ್ ಬೆಂಬಲಿಗರಲ್ಲ, ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ್ಯಗಳು ಅವರಿಗೆ ಇದೆ. ಆದರೆ ಯಾವ ಶಾಸಕರು ಏನನ್ನೇ ಹೇಳಿದರೂ ಅಂತಿಮವಾಗಿ ಅವರನ್ನೂ ಸೇರಿದಂತೆ ನಾನು ಮತ್ತು ಶಿವಕುಮಾರ್ ನಮ್ಮ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು. ಇದನ್ನು ನಾವಿಬ್ಬರೂ ಒಂದಲ್ಲ ನೂರು ಬಾರಿ ಹೇಳಿದ್ದೇವೆ. ಇದೇ ಅಂತಿಮ ಸತ್ಯ.

ಇದನ್ನೂ ಓದಿ 👇:

ಉಡುಪಿ ಕಂಬಳಕ್ಕೆ ನನ್ನ ಅಭ್ಯಂತರವಿಲ್ಲ , ಆದರೆ ಅದು ಬಿಜೆಪಿ ಕಂಬಳ ಆಗಬಾರದು : ವಿನಯಕುಮಾರ್ ಸೊರಕೆ – vishwanews24

ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿ ನಮ್ಮಿಬ್ಬರ ಸಂಬಂಧವನ್ನು ಕೆಡಿಸಿ ಡಿ.ಕೆ.ಶಿವಕುಮಾರ್ ಅವರನ್ನು ಒಲಿಸಿಕೊಳ್ಳುವ ದುರಾಲೋಚನೆ ಏನಾದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ದರೆ, ಅವರ ಹಗಲು ಕನಸುಗಳಿಗೆ ಶುಭ ಹಾರೈಸುತ್ತೇನೆ. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ, ಸುಳ್ಳು ಕೇಸ್ ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು ಎನ್ನುವುದು ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ.

ರಾಜ್ಯದ ಪ್ರಜ್ಞಾವಂತ ಮತದಾರರು ಐದು ವರ್ಷಗಳ ಕಾಲ ಸರ್ಕಾರ ನಡೆಸಲು ನಮಗೆ ಜನಾದೇಶ ನೀಡಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಕುತಂತ್ರ-ಕುಚೇಷ್ಠೆಗಳ ನಡುವೆಯೂ ಈ ಅವಧಿಯನ್ನು ಕಾಂಗ್ರೆಸ್ ಪಕ್ಷ ಪೂರ್ಣಗೊಳಿಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ.

Leave a Reply