ಬಿಜೆಪಿ ಕಾರ್ಯಕರ್ತರು ಎಂದಿಗೂ ನನ್ನನ್ನು ವಿರೋಧಿಸಿಲ್ಲ ; ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ನನ್ನ ಕ್ಷೇತ್ರಕ್ಕೆ ತಂದಿದ್ದು, ಅಭಿವೃದ್ಧಿಗೆ ಶ್ರಮಿಸಿದ್ದೇನೆ :ಸಂಸದೆ ಶೋಭಾ ಕರಂದ್ಲಾಜೆ – Vishwanews24

Featured, ಉಡುಪಿ

ಉಡುಪಿ :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳು ಜನತೆಗೆ ಆಶಾಕಿರಣವಾಗಿವೆ. ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ನನ್ನ ಕ್ಷೇತ್ರಕ್ಕೆ ತಂದಿದ್ದು, ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತನ್ನ ಆಡಳಿತ ಅವಧಿಯ ಸಾಧನೆಗಳ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಿದ ಅವರು, ಉಡುಪಿ, ಚಿಕ್ಕಮಗಳೂರಿಗೆ ಕೇಂದ್ರಿಯ ವಿದ್ಯಾಲಯ, ರಾಜ್ಯದಲ್ಲಿ ಪ್ರಥಮ ಸಖಿ ಕೇಂದ್ರ, ಬ್ರಹ್ಮಾವರ ಪಾಸ್‌ಪೋರ್ಟ್ ಕೇಂದ್ರ, ಹೆದ್ದಾರಿ ಮೇಲ್ದರ್ಜೆಗೆ, ಅಂಚೆ ವಿಭಾಗೀಯ ಕೇಂದ್ರದಂಥ ಮಹತ್ವದ ಯೋಜನೆಗಳು ಉಡುಪಿಗೆ ಬಂದಿದೆ. ಸಿಆರ್‌ಎಫ್‌ನಿಂದ 569 ಕೋಟಿ ರೂ. ರಸ್ತೆಗಳ ನಿರ್ಮಾಣಕ್ಕೆ ಅನುದಾನ ತಂದಿದ್ದೇನೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ ದೇಶದ ರಕ್ಷಣಾ ವ್ಯವಸ್ಥೆ, ವಿದೇಶ ಸಂಬಂಧ ವೃದ್ದಿ, ದೇಶದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ ಸಂಬಂಧಿಸಿ ನಾಲ್ಕು ಪ್ರಮುಖ ಅಂಶದ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಪ್ರಧಾನಿ ಸಚಿವರು, ಸಂಸದರು ಕಾರ್ಯನಿರ್ವಹಿಸಿದ್ದಾರೆ. ಗ್ಯಾಸ್ ರಹಿತ ಕುಟುಂಬಕ್ಕೆ ಉಜ್ವಲ ಯೋಜನೆ ನೆರವಾಗಿದೆ. ದೇಶದಲ್ಲಿ ಸ್ವಚ್ಛತೆಯ ಕ್ರಾಂತಿ ಹರಡಿದ್ದು 5.50 ಲಕ್ಷ ಗ್ರಾಮ ಬಯಲುಶೌಚ ಮುಕ್ತವಾಗಿದೆ ಎಂದು ಮಾಹಿತಿ ನೀಡಿದರು.

ವಿರೋಧಿಗಳು ಬಿಜೆಪಿ ಕಾರ್ಯಕರ್ತರಲ್ಲ: ಗೆಲುವಿನ ಸೀಟ್‌ಗಾಗಿ ಎಲ್ಲರೂ ಟಿಕೆಟ್ ಬಯಸುತ್ತಾರೆ, ಈ ವಿಚಾರದಲ್ಲಿ ಆಕಾಂಕ್ಷಿಗಳು ಸಹಜ. ನನ್ನನ್ನು ವಿರೋಧಿಸುವವರು ಬಿಜೆಪಿ ಕಾರ್ಯಕರ್ತರಲ್ಲ. ಯಾರೋ ಕೆಲವರ ಬೆಂಬಲಿಗರಷ್ಟೇ ವಿರೋಧಿಸುತ್ತಾರೆ, ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಿಜೆಪಿ ಕಾರ್ಯಕರ್ತರು ಎಂದಿಗೂ ನನ್ನನ್ನು ವಿರೋಧಿಸಿಲ್ಲ ಎಂದು ಶೋಭಾ ಹೇಳಿದರು. ರಾಜ್ಯದಲ್ಲಿ ಪಕ್ಷದಿಂದ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಸಾಧ್ಯತೆ ಇದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದ ಸಂಸದೀಯ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್, ಮುಖಂಡರಾದ ಉದಯಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಗೀತಾಂಜಲಿ ಸುವರ್ಣ, ಸಂಧ್ಯಾ ರಮೇಶ್, ಸುಪ್ರಸಾದ್ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.