ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ : ಯು.ಟಿ.ಖಾದರ್ -Vishwanews24

ದಕ್ಷಿಣ ಕನ್ನಡ

ಮಂಗಳೂರು,: ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ವಿಪರೀತ ವರ್ಗಾವಣೆಗೆ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಇದಕ್ಕೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ  ನಿದರ್ಶನವಾಗಿದೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕರು, ರಾಜೀನಾಮೆ ಹಿಂದೆಗೆದುಕೊಳ್ಳುವಂತೆ ಸಸಿಕಾಂತ್ ಸೆಂಥಿಲ್ ಅವರನ್ನು ಮನವೊಲಿಸುವಂತೆ ಮುಖ್ಯ ಕಾರ್ಯದರ್ಶಿಯನ್ನು ಒತ್ತಾಯಿಸಿದ್ದೇನೆ ಎಂದರು.

ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಮೇಲಿಂದ ಮೇಲೆ ಅಧಿಕಾರಿಗಳ ವರ್ಗಾವಣೆ ಪರ್ವ ಇನ್ನಿಲ್ಲದಂತೆ ಮುಂದುವರಿದಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಉಡುಪಿ ಜಿಲ್ಲಾಧಿಕಾರಿ, ದ.ಕ. ಜಿಲ್ಲೆಯ ಹೌಸಿಂಗ್ ಬೋರ್ಡ್‌ನ ಅಧಿಕಾರಿ ಸೇರಿದಂತೆ ಇನ್ನು ಅಸಂಖ್ಯಾತ ಸಂಖ್ಯೆಯಲ್ಲಿ ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

ಯಾವುದೇ ಅಧಿಕಾರಿ ರಾಜೀನಾಮೆ ಸಲ್ಲಿಸುವ ಆಲೋಚನೆ ಮಾಡುತ್ತಾರೆಂದರೆ, ಅಂಥವರು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣವಿಲ್ಲ ಎನ್ನುವುದು ಇದರಿಂದ ಖಾತರಿಯಾಗುತ್ತದೆ. ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡಲು ಬಿಟ್ಟರೆ ಯಾರೂ ಹುದ್ದೆಯನ್ನು ತ್ಯಜಿಸುವುದಿಲ್ಲ ಎಂದು ಹೇಳಿದರು.