ಬಿಜೆಪಿ ಸರ್ಕಾರ ಕರ್ನಾಟಕವನ್ನು ಮತ್ತೊಂದು ಕಾಶ್ಮೀರ ಮಾಡಲು ಹೊರಟಿದೆ : ಎಚ್. ಡಿ. ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ರಾಜ್ಯವನ್ನು ಮತ್ತೊಂದು ಕಾಶ್ಮೀರ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಂಗಳೂರು ಗಲಭೆಯಲ್ಲಿ ಪೊಲೀಸರ ಪಾತ್ರದ ಕುರಿತ ಸಿ.ಡಿ ಬಿಡುಗಡೆ ಮಾಡಿದರು. ಅಲ್ಲದೆ, ಪ್ರತಿಭಟನಾಕಾರರು ಬಂದರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಸಿಸಿ ಟಿವಿ ವಿಡಿಯೊಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಮಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನಡೆಯಬೇಕಿದ್ದ ‘ಪೀಪಲ್ಸ್ ಕೋರ್ಟ್’ ಎಂಬ ಚರ್ಚಾ ಕಾರ್ಯಕ್ರಮ ನಡೆಸಲು ಅವಕಾಶ ನಿರಾಕರಿಸಿದ ಸರ್ಕಾರದ ಕ್ರಮವನ್ನು ಪ್ರಬಲವಾಗಿ ವಿರೋಧಿಸಿದರು.

ಉಡುಪಿ ಜಿಲ್ಲಾಧಿಕಾರಿಯ  ಮ್ಯಾಜಿಸ್ಟ್ರೇಟ್‌ ತನಿಖೆಯಿಂದ ಏನು ವರದಿ ಬರಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಗಲಭೆಕೋರರು ಕೇರಳದಿಂದ ಬಂದವರು ಎಂದು ಗೃಹ ಸಚಿವರು ಹೇಳುತ್ತಾರೆ,  ಪೊಲೀಸರು ನಿತ್ಯವೂ ಒಂದೊಂದು ಕತೆ ಕಟ್ಟುತ್ತಿದ್ದಾರೆ.  ಡಿಸೆಂಬರ್  24 ರಂದು ಪ್ರತಿಭಟನಾಕಾರರು ಕಲ್ಲುಗಳನ್ನು ತಂದ ಬಗ್ಗೆ ಕತೆ ಕಟ್ಟಿದರು. ಆದರೆ ನಿಜವಾಗಿ ಅಲ್ಲಿ ಆಗಿರುವುದೇ ಬೇರೆ. ಮೂರು ಬಾರಿ ಕಟ್ಟಡ ತ್ಯಾಜ್ಯ ಸಾಗಿಸಿದ್ದ ಸರಕು ಸಾಗಾಣೆ ಟೆಂಪೊ ಚಾಲಕ,  ನಾಲ್ಕನೇ  ಬಾರಿ ಬರುವಾಗ ಗಲಭೆ ಉಂಟಾದ ಕಾರಣ ತನ್ನ ಆಟೊವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದ. ಆದರೆ ಅದನ್ನೇ ಕತೆ ಕಟ್ಟಿ ಕಲ್ಲು ತಂದು ಇಡಲಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.