ಉಡುಪಿ: ಬ್ರಹ್ಮಾವರ ಅಯ್ಯಪ್ಪ ಮಂದಿರದಲ್ಲಿ ನಡೆದ ಅಚ್ಚರಿಯ ಘಟನೆ -Vishwanews24

Featured, ಉಡುಪಿ

ಉಡುಪಿ: ಇಲ್ಲಿನ ಬ್ರಹ್ಮಾವರ ತಾಲೂಕಿನಲ್ಲಿ ಯಕ್ಷಗಾನ ವೇಷಧಾರಿಯೊಬ್ಬರ ಮೇಲೆ ದೈವದ ಆವಾಹನೆಯಾಗಿರುವ ಘಟನೆಯೊಂದು ವರದಿಯಾಗಿದೆ.

ಹಟ್ಟಿಯಂಗಡಿ ಯಕ್ಷಗಾನ ಮೇಳದ ಕಲಾವಿದರೊಬ್ಬರು ಧೂಮಾವತಿ ದೈವದ ವೇಷ ಧರಿಸಿದ್ದ ಸಂದರ್ಭದಲ್ಲಿ ದೈವದ ಆವಾಹನೆಯಾಗಿದೆ. ಯಕ್ಷಗಾನ ಪಾತ್ರಧಾರಿ ರಾಜೇಶ್ ಆಚಾರ್ಯ ದೈವದ ವೇಷ ಧರಿಸಿದ್ದರು. ರಂಗಸ್ಥಳ ಪ್ರವೇಶಕ್ಕೂ ಮುನ್ನ ಅವರನ್ನು ಪ್ರೇಕ್ಷಕರ ನಡುವೆಯಿಂದ ಕರೆತರಲಾಗಿತ್ತು. ಈ ಸಂದರ್ಭ ಅವರ ಮೈಮೇಲೆ ದೈವದ ಆವೇಶ ಬಂದಿದೆ.

ದೈವದ ಆವಾಹನೆಯಾದ ಸಂದರ್ಭ ಪಂಜು ಹಿಡಿದು ವಿಚಿತ್ರವಾಗಿ ವರ್ತಿಸಿದ ಕಲಾವಿದ ನೆಲಕ್ಕೆ ಕುಸಿದು ಬಿದ್ದಿದ್ದಾರೆ ಎಂದು ಪ್ರೇಕ್ಷಕರು ತಿಳಿಸಿದ್ದಾರೆ.

ಬ್ರಹ್ಮಾವರ ಅಯ್ಯಪ್ಪ ಮಂದಿರದಲ್ಲಿ ದೈವ ದೃಷ್ಟಿ ಎಂಬ ಯಕ್ಷಗಾನ ಪ್ರಸಂಗವನ್ನು ತಂಡ ಆಡಿಸಿದ ವೇಳೆ ಘಟನೆ ನಡೆದಿದೆ. ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ ಕೂಡಲೇ ಆಗಮಿಸಿ ಪ್ರಸಾದ ಹಾಕಿದ ನಂತರ ಪಾತ್ರಧಾರಿ ಶಾಂತವಾಗಿದ್ದಾರೆ. ಬಳಿಕ ಯಕ್ಷಗಾನ ಪ್ರಸಂಗ ಯಾವುದೇ ರೀತಿಯ ವಿಘ್ನ ಇಲ್ಲದೇ ಮುಂದುವರಿದಿದೆ ಎನ್ನಲಾಗಿದೆ.

ಕಲಾವಿದ ರಾಜೇಶ್ ಆಚಾರ್ಯ ಮಾತನಾಡಿ, ಆ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಕೆಲವು ಕ್ಷಣಗಳ ನಂತರ ಸಹಜ ಸ್ಥಿತಿಗೆ ಬಂದಿದ್ದೇನೆ ಎಂದು ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.