ಬ್ರಿಟನ್ನಲ್ಲಿ ಹೊಸ ರೂಪದ ಕೊರೋನಾ ವೈರಸ್ ಪತ್ತೆ -ಉಡುಪಿಗೂ ಬ್ರಿಟನ್ನಿಂದ ಆಗಮಿಸಿದ ಎಂಟು ಮಂದಿ- ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿ -vishwanews24
ಉಡುಪಿ: ಬ್ರಿಟನ್ನಲ್ಲಿ ಹೊಸ ರೂಪದ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದರಿಂದ ಆತಂಕ ಸೃಷ್ಟಿಯಾಗಿದೆ. ಈ ಮಧ್ಯೆ ಉಡುಪಿ ಜಿಲ್ಲೆಗೆ ಬ್ರಿಟನ್ನಿಂದ 8 ಮಂದಿ ಆಗಮಿಸಿದ್ದಾರೆ. ಎಲ್ಲರನ್ನೂ ಮನೆಗಳಲ್ಲಿಯೇ ದಿಗ್ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಬ್ರಿಟನ್ನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 8 ಮಂದಿಯ ಗಂಟಲ ದ್ರವವನ್ನು ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ವರದಿ ನಿರೀಕ್ಷೆಯಲ್ಲಿದೆ. ಬ್ರಿಟನ್ನಿಂದ ಆಗಮಿಸಿದವರಲ್ಲಿ ಕಾರ್ಕಳ ತಾಲೂಕಿನ ನಾಲ್ವರು, ಉಡುಪಿ ತಾಲೂಕಿನ ಮೂವರು ಮತ್ತು ಕುಂದಾಪುರ ತಾಲೂಕಿನ ಒಬ್ಬರು ಸೇರಿದ್ದಾರೆ ಎಂದು ಡಿಎಚ್ಒ ಮಾಹಿತಿ ನೀಡಿದ್ದಾರೆ.
ಬ್ರಿಟನ್ನಲ್ಲಿ ಹೊಸ ವಿಧದ ಕೊರೋನಾ ಸೋಂಕು ಪತ್ತೆಯಾಗಿದ್ದು, ಅತಿ ವೇಗವಾಗಿ ಹರಡಬಲ್ಲ ಇದರ ಲಕ್ಷಣದಿಂದಾಗಿ ಆತಂಕ ಎದುರಾಗಿದೆ. ಈ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ದೇಶಗಳು ಬ್ರಿಟನ್ನಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿವೆ. ಈ ನಡುವೆ ಭಾರತದಲ್ಲೂ ಡಿ. 31ರವರೆಗೆ ಬ್ರಿಟನ್ನಿಂದ ಬರುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಈಗಾಗಲೇ ಬ್ರಿಟನ್ನಿಂದ ಭಾರತಕ್ಕೆ ಬಂದ 266 ಮಂದಿ ಪ್ರಯಾಣಿಕರಲ್ಲಿ, ದಿಲ್ಲಿ ಮತ್ತು ಕೋಲ್ಕತಾದಲ್ಲಿ 7 ಪ್ರಯಾಣಿಕರಲ್ಲಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ.
