ಭಾರತ ಅನೇಕ ಶ್ರೇಷ್ಠ ನೇತಾರರನ್ನು ಕಂಡಿದೆ , ಆದರೆ ತಾಯಿ ಪ್ರತೀಕವಾಗಿದ್ದ ಸುಷ್ಮಾಜೀ ಅವರಿಗೆ ಸರಿಸಾಟಿಯಾಗಬಲ್ಲವರು ಯಾರೂ ಇಲ್ಲ : ಶಾಸಕ ಶ್ರೀರಾಮುಲು -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಹಿರಿಯ ಬಿಜೆಪಿ ನಾಯಕಿ, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಕಂಬನಿ ಮಿಡಿದಿದ್ದಾರೆ.

ಸುಷ್ಮಾ ಸ್ವರಾಜ್ ನಿಧನಕ್ಕೆ ಟ್ವೀಟರ್ ನಲ್ಲಿ ಸಂತಾಪ ಸೂಚಿಸಿರುವ ಶ್ರೀರಾಮುಲು, ಭಾರತ ಅನೇಕ ಶ್ರೇಷ್ಠ ನೇತಾರರನ್ನು ಕಂಡಿದೆ, ಆದರೆ ಮಾತೃಹೃದಯದ, ಮಮತೆಯ ವ್ಯಕ್ತಿರೂಪವಾಗಿದ್ದ, ತಾಯಿ ಪ್ರತೀಕವಾಗಿದ್ದ ಸುಷ್ಮಾಜೀ ಅವರಿಗೆ ಸರಿಸಾಟಿಯಾಗಬಲ್ಲವರು ಯಾರೂ ಇಲ್ಲ. ಇಂದು ಸುಷ್ಮಾಜೀ ಅವರನ್ನು ಕಳೆದುಕೊಂಡು ನಾನು ಮಾತ್ರವಲ್ಲ, ನನ್ನಂಥ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಮಾತೃಶೋಕದಲ್ಲಿದ್ದೇವೆ, ಅನಾಥರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ನಾವು ರಾಜಕಾರಣಿಗಳ ಮಕ್ಕಳಲ್ಲ, ನಾವು ರಾಜಕೀಯ ಪ್ರವೇಶಕ್ಕೆ ಸುಷ್ಮಾ ಸ್ವರಾಜ್ ಅವರೇ ಕಾರಣ, ನಮ್ಮ ಸೇವೆ ಸಮಾಜಕ್ಕೆ ಬಹಳ ಇದೆ ಎಂದು ಅರಿವು ಮೂಡಿಸಿ, ರಾಜಕಾರಣಕ್ಕೆ ನಮ್ಮನ್ನು ತಂದವರು. ಹಾಗಾಗಿ ಸಾಮಾನ್ಯ ಕುಟುಂಬದಲ್ಲಿ ಬೆಳೆದ ನಾವು ಇಂದು ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದೆವು. ಅವರ ಪ್ರೀತಿ, ವಾತ್ಸಾಲ್ಯವನ್ನು ಉಸಿರು ಇರುವ ತನಕ ಮರೆಯುವ ಹಾಗಿಲ್ಲ .

ನನ್ನನ್ನು ಸದಾ ಆಶೀರ್ವದಿಸುತ್ತಾ, ಕೈಹಿಡಿದು ನಡೆಸಿದ ತಾಯಿ ಸ್ವರೂಪರು ಇಂದು ನಮ್ಮೊಂದಿಗೆ ಇಲ್ಲ. ದುಃಖವನ್ನು ಹೇಳಲು ಪದಗಳು ಸಿಗುತ್ತಿಲ್ಲ. ಇತಿಹಾಸದಲ್ಲಿ ಮರೆಯಲಾಗದ ಸಾಧನೆ, ವ್ಯಕ್ತಿತ್ವ ಮತ್ತು ನೆನಪುಗಳನ್ನು ಬಿಟ್ಟು ಹೋಗಿರುವ ತಾಯಿ ಸುಷ್ಮಾಜೀಗೆ ನನ್ನ ಕೋಟಿಕೋಟಿ ನಮನಗಳು. ಅಮ್ಮ, ದೇವರು ನಿಮಗೆ ಸದ್ಗತಿಯನ್ನು ಕೊಡುವುದು ಖಂಡಿತ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.