ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ 8 ಮಂದಿ ದುರ್ಮರಣ

Featured, ರಾಷ್ಟ್ರ ನ್ಯೂಸ್

ತಿರುಚಿ: ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಹೆಂಗಸರು ಹಾಗೂ ಮಕ್ಕಳಿಬ್ಬರು ಸೇರಿದಂತೆ ಒಂದೇ ಕುಟುಂಬದ 8 ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ತಿರುಚಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಸಮಯಪುರಂ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 45ರಲ್ಲಿ ಈ ಅವಘಡ ಸಂಭವಿಸಿದೆ.

ಎಸ್​ಯುವಿ ಕಾರಿನಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು. ಚೆನ್ನೈನ ಮೆದವಕ್ಕಮ್​ನಿಂದ ತಿರುಚಿ-ಕರೂರು ಹೆದ್ದಾರಿ ಮಾರ್ಗವಾಗಿ ಪೆಟ್ಟವೈತಲಯ್​ ಕಡೆ ಪ್ರಯಾಣಿಸುತ್ತಿದ್ದರು. ಈ ವೇಳೆ ಸಮಯಪುರಂನಲ್ಲಿರುವ ಟೋಲ್​ ಸಂಗ್ರಹ ಕೇಂದ್ರದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಭರ್ತಿಯಾಗಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿ, ಸಮಯಪುರಂ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ತಿರುಚಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.