ಭ್ರಷ್ಟಚಾರದ ವಿರುದ್ಧ ಹೋರಾಡಲು ನಾನು ಶಾಸಕನಾಗಬೇಕಿದೆ , ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ : ವಾಟಾಳ್ ನಾಗರಾಜ್ -Vishwanews24
ಬೆಂಗಳೂರು:”ಕಾಂಗ್ರೆಸ್-ಜೆಡಿಎಸ್ನಿಂದ ಬಿಜೆಪಿಗೆ ಸೇರಿದ ಪಕ್ಷಾಂತರಿಗಳನ್ನು ಸೋಲಿಸಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಕರ್ನಾಟಕದ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಪಕ್ಷಾಂತರಿಗಳಿಗೆ ಮತ ಹಾಕಬಾರದು. ಈ ಬಾರಿ ಉಪಚುನಾವಣೆಯಲ್ಲಿ ಸೋಲಿಸಿ ಬುದ್ದಿ ಕಲಿಸಬೇಕೆಂದು” ಜನತೆಗೆ ಮನವಿ ಮಾಡಿದರು.
ಭಾನುವಾರ ಮೈಸೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ ಶಾಸಕರ ವಿರುದ್ಧ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇಲ್ಲಿನ ರೈಲು ನಿಲ್ದಾಣದ ಮುಂಭಾಗ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪಕ್ಷಾಂತರಿಗಳನ್ನು ಸೋಲಿಸುವಂತೆ ಕರೆ ನೀಡಿದರು. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವ ಹಾಳಾಗಿದೆ. ತಮ್ಮ ಸ್ವಹಿತಾಸಕ್ತಿಗಾಗಿ ಹೀಗೆ ಪಕ್ಷಾಂತರ ಮಾಡುತ್ತಿದ್ದಾರೆ. ಇದೊಂದು ರೀತಿ ಥೇಟ್ ದರೋಡೆ ಮಾಡಿದಾಗೇ. ಸುಪ್ರೀಂಕೋರ್ಟ್ ಅನರ್ಹ ಶಾಸಕರು ಚುನಾವಣೆಗೆ ನಿಲ್ಲಬಹುದು ಎಂದು ತೀರ್ಪು ನೀಡಿದೆ. ಮತ್ತೊಮ್ಮೆ ತನ್ನ ತೀರ್ಪು ಮರು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಎಂದರು.
ಅನರ್ಹ ಶಾಸಕರನ್ನು ಜನ ತಿರಸ್ಕರಿಸಬೇಕು. ಇಂತಹ ರಾಜಕಾರಣಿಗಳು ಸಂಸದೀಯ ವ್ಯವಸ್ಥೆಗೆ ಕಪ್ಪುಚುಕ್ಕೆ ತರುತ್ತಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಸೋಲಿಸುವ ಮುಖೇನ ಬುದ್ದಿ ಕಲಿಸಬೇಕೆಂದು ಒತ್ತಾಯಿಸಿದರು. ಇಂತಹ ಅಪ್ರಾಮಾಣಿಕ ರಾಜಕಾರಣಿಗಳ ವಿರುದ್ಧ ಹೋರಾಟಕ್ಕೆ ನಾನು ಸದಾ ಸಿದ್ದ ಎಂದು ಹೇಳಿದರು. ಭ್ರಷ್ಟಚಾರದ ವಿರುದ್ಧ ಹೋರಾಡಲು ನಾನು ಶಾಸಕನಾಗಬೇಕಿದೆ. ಹಾಗಾಗಿ ಶಿವಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್ನಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಂದರೆ ಯಡವಟ್ಟು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ವಿನಂತಿಸಿದರು.
