ಮಂಗಳೂರು :ಉದ್ಯಾವರ ಅರಸು ದೈವಗಳ ಜಮಾತ್ ಭೇಟಿ ;”ಹಿಂದೂ-ಮುಸ್ಲಿಂ ಬಾಂಧವ್ಯದ ಅಪೂರ್ವ ಸಂಗಮ”; -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು,ಮಂಜೇಶ್ವರ ಸಮೀಪದ ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವಗಳು, ಉದ್ಯಾವರ ಸಾವಿರ ಜಮಾತ್ ಮಸೀದಿಗೆ ಭೇಟಿ ನೀಡುವ ಅಪೂರ್ವ ಧಾರ್ಮಿಕ ಕಾರ್ಯಕ್ರಮ ನಡೆದಿದೆ.

ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ವಾಡಿಕೆಯಾಗಿದೆ.ಆ ಶುಕ್ರವಾರದ ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು  ಜಮಾಹತ್ ಗೆ ತಲುಪುತ್ತವೆ .ಈ ವೇಳೆ ಜುಮಾ ನಮಾಝ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿಯ ಪ್ರತಿನಿಧಿಗಳು ಹಾಗೂ ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿಯ ಸ್ವಾಗತ ನೀಡುತ್ತಾರೆ. ಜಮಾಅತಿನ ಸರ್ವ ಮುಸ್ಲಿಂ ಬಾಂಧವರನ್ನು ಜಾತ್ರೋತ್ಸವಕ್ಕೆ ಆಹ್ವಾನಿಸಿದೆ.

ಉದ್ಯಾವರ ಶ್ರೀ ಮಾಡ ದೈವ ಕ್ಷೇತ್ರದ ದೈವ ಪಾತ್ರಿಗಳು ಉದ್ಯಾವರ ಸಾವಿರ ಜಮಾತ್ ಮಸೀದಿಗೆ ಭೇಟಿ ನೀಡಿದ ವೇಳೆ ಮಸೀದಿಯ ಆಡಳಿತ ಸಮಿತಿಯ ಪ್ರತಿನಿಧಿಗಳು, ಹಾಗೂ ಮುಸ್ಲಿಂ ಬಾಂಧವರು ದೈವ ಪಾತ್ರಿಗಳಿಗೆ ಪೂರ್ವ ಪರಂಪರೆಯಂತೆ ವೈಭವದ ಸ್ವಾಗತ ನೀಡಿದ್ದಾರೆ.

ವಿಶೇಷವೆಂದರೆ ಉದ್ಯಾವರ ಮಾಡದ ಶ್ರೀ ಅರಸು ದೈವದ ಜಾತ್ರೆಯಲ್ಲಿ ಮುಸ್ಲಿಂ ಬಾಂಧವರೂ ಕೂಡ ಪಾಲ್ಗೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಂತೆ ನೇಮೋತ್ಸವ ನಡೆಯುವ ದಿನದಂದು ಮಸೀದಿಯ ಅಧಿಕೃತರು ಕೂರಲು ದೈವಸ್ಥಾನದಲ್ಲಿ ವಿಶೇಷವಾದ ಸ್ಥಳವನ್ನು ಕೊಟ್ಟು, ಗೌರವದಿಂದ ಕಾಣುತ್ತಾರೆ. ಜಾತ್ರೆಯ ದಿನ ದೈವಗಳು ಆಶೀರ್ವದಿಸಿ ನೀಡಿದ ಹೂವನ್ನು ಜಮಾತಿನವರಿಗೆ ನೀಡಲಾಗುತ್ತದೆ.

ಈ ಪವಿತ್ರವಾದ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಭೇದಭಾವವಿಲ್ಲದೆ ಹಿಂದೂ ಮುಸಲ್ಮಾನರು ಪಾಲ್ಗೊಳ್ಳುದು ಇಲ್ಲಿಯ ವಿಶೇಷತೆಯಾಗಿದೆ..

ಮೇ 9ರಿಂದ 15ರ ತನಕ ಕ್ಷೇತ್ರದ ಜಾತ್ರೆ ನಡೆಯಲಿದ್ದು, ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾತ್ ವ್ಯಾಪ್ತಿಯಲ್ಲಿರುವ ಹೆಚ್ಚಿನ ಮುಸ್ಲಿಂ ಬಾಂಧವರೂ ಪಾಲ್ಗೊಳ್ಳುತ್ತಾರೆ.