ಮಂಗಳೂರು : ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಗತ್ಯವಿದೆ : ಡಿ ಕೆ ಶಿ – Vishwanews24
ಮಂಗಳೂರು : ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಗತ್ಯವಿದೆ : ಡಿ ಕೆ ಶಿ – Vishwanews24
ಮಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ದೇಶ ಈಗ ಅತ್ಯಂತ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ. ದೇಶವನ್ನು ಮರುನಿರ್ಮಾಣ ಮಾಡಬೇಕಾಗಿದೆ. ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ಹೀಗಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಬ್ಲಾಕ್, ಜಿಲ್ಲಾ ಪದಾಧಿಕಾರಿಗಳ ಚುನಾವಣೆ ನಿಗದಿಯಾಗಿದ್ದು, ಈಗ ಸದಸ್ಯತ್ವ ನೋಂದಣಿ ಮಾಡಿಕೊಂಡರೆ ಮತದಾನದ ಹಕ್ಕು ನೀಡಲಾಗುವುದು. ಇದಕ್ಕಾಗಿ 40 ಬೂತ್ಗಳಿಗೆ ಒಬ್ಬ ಮುಖ್ಯ ನೋಂದಣಿದಾರರನ್ನು ನೇಮಕ ಮಾಡಿದ್ದೇವೆ. ಮುಂದಿನ ಚುನಾವಣೆ ಸಂದರ್ಭ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದ ಸದಸ್ಯರ ಅಭಿಪ್ರಾಯ ಕೇಳಲು ಅನುಕೂಲವಾಗಲಿದೆ. ಕಾಂಗ್ರೆಸ್ ಕಾರ್ಯಕರ್ತರ ಭಾವನೆ ಪಕ್ಷದ ರಾಜ್ಯಾಧ್ಯಕ್ಷರ ಭಾವನೆಯಾಗಬೇಕು. ಯಾರು ನಮ್ಮ ನಾಯಕರಾಗಬೇಕು ಎಂಬುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನು ಆನ್ಲೈನ್ ಮೂಲಕ ಸಂಗ್ರಹಿಸಲು ಅನುಕೂಲವಾಗುವಂತೆ ಡಿಜಿಟಲ್ ಸದಸ್ಯತ್ವ ನೋಂದಣಿ ಪ್ರಾರಂಭಿಸಿದ್ದೇವೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದಲ್ಲಿ ನಂಬಿಕೆ ಇರುವವರು 5 ರೂ. ಕೊಟ್ಟು ಸದಸ್ಯರಾಗಬಹುದು. ಗುರುತಿನ ಚೀಟಿ ಪಡೆಯಲು ಇಚ್ಛಿಸುವವರು ಜಿಲ್ಲಾ ಕಾಂಗ್ರೆಸ್ ನಲ್ಲಿ 10 ರೂ. ನೀಡಿ ಪಡೆಯಬಹುದು. ಸದಸ್ಯತ್ವ ವಿಚಾರದಲ್ಲಿ ಮುಖ್ಯ ನೋಂದಣಿದಾರರನ್ನು ಭೇಟಿ ಮಾಡಿ, ಪ್ರತಿಯೊಬ್ಬರಿಗೂ ಬೂತ್ಗಳನ್ನು ಹಂಚಲು, ಅವರೊಂದಿಗೆ ಚರ್ಚೆ ಮಾಡಲು ಮಂಗಳೂರು ಹಾಗೂ ಉಡುಪಿಗೆ ಭೇಟಿ ನೀಡುತ್ತಿದ್ದೇನೆ ಎಂದಿದ್ದಾರೆ.
