ಮಂಗಳೂರು: ಫಲಿತಾಂಶದ ದಿನ ಕಾಂಗ್ರೆಸ್ ಕಣ್ಣೀರು ಸುರಿಸಲಿದೆ :ನಿಜವಾಯಿತು ಜನಾರ್ಧನ ಪೂಜಾರಿ ಭವಿಷ್ಯ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ.

60 ವಾರ್ಡ್ ಗಳ ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪಾಲಿಕೆಯ ಅಧಿಕಾರದ ಗದ್ದುಗೆಯಲ್ಲಿ ಕೂರಲು ರೆಡಿಯಾಗಿದೆ.

ಬಿಜೆಪಿ ಈ ಬಾರಿ ಜಯಗಳಿಸಲಿದೆ ಎನ್ನುವ ಹಿರಿಯ ಕಾಂಗ್ರೇಸ್ ಮುಖಂಡ ಬಿ. ಜನಾರ್ಧನ ಪೂಜಾರಿಯವರ ಭವಿಷ್ಯ ಇಲ್ಲಿ ನಿಜವಾಗಿದೆ.

ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ, “ಫಲಿತಾಂಶದ ದಿನ ನ.14 ರಂದು ಕಾಂಗ್ರೆಸ್ ಕಣ್ಣೀರು ಸುರಿಸಲಿದೆ ” ಕಾಂಗ್ರೇಸ್ ಪಕ್ಷ ಅಭ್ಯರ್ಥಿ ಆಯ್ಕೆಯಲ್ಲಿ ನಡೆಸಿದ ಗೊಂದಲ, ಪಕ್ಷದಲ್ಲಿ ಹೆಚ್ಚಾದ ಭಿನ್ನಮತದ ಲಾಭವನ್ನು ಬಿಜೆಪಿ ಪಕ್ಷ ಪಡೆಯುವ ಮೂಲಕ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲಿದೆ ಎಂದು ಜನಾರ್ಧನ ಪೂಜಾರಿ ಚುನಾವಣೆಗೆ ಮೊದಲೇ ವಿಶ್ಲೇಷಿಸಿದ್ದರು.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಬಂಧಿಸಿದಂತೆ ಜಿಲ್ಲೆಯ ಹಿರಿಯ ಕಾಂಗ್ರೇಸ್ ಮುಖಂಡರಾದ ಜನಾರ್ಧನ ಪೂಜಾರಿಯವರ ಅಭಿಪ್ರಾಯವನ್ನೂ ಜಿಲ್ಲಾ ಕಾಂಗ್ರೇಸ್ ಕೇಳದಿರುವುದೂ ಪೂಜಾರಿ ನಿಷ್ಟರ ಅಸಮಾಧಾನಕ್ಕೂ ಕಾರಣವಾಗಿತ್ತು.

ಕರಾವಳಿಯ ಸಂಸದ ನಳಿನ್ ಕುಮಾರ್ ಒಲಿದ ರಾಜ್ಯಾಧ್ಯಕ್ಷ ಸ್ಥಾನ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉತ್ತರ ಶಾಸಕ ಭರತ್ ಶೆಟ್ಟಿ ಅವರಿಬ್ಬರು ಟೊಂಕಕಟ್ಟಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ ರೀತಿ, ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಪೋಟಗೊಳ್ಳದಂತೆ ಹೊಸ ಮುಖ ಹಾಗೂ ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್, ಬಿಜೆಪಿಯ ಶಿಸ್ತುಬದ್ದ ಪ್ರಚಾರ, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯ ಪ್ರಚಾರ ಎಲ್ಲವೂ ಬಿಜೆಪಿಯ ಗೆಲುವಿಗೆ ವರವಾಗಿ ಪರಿಣಮಿಸಿ ನಿರೀಕ್ಷೆಗೂ ಮೀರಿದ ಗೆಲುವು ಪಡೆದುಕೊಳ್ಳುವಲ್ಲಿ ಸಫಲವಾಯಿತು.

ಕಾಂಗ್ರೇಸ್ ಪಕ್ಷ ಈ ಬಾರಿ ಕೇವಲ 14 ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.