ಮಂಗಳೂರು ಬೀಚ್ ಗೆ ಬಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ; ಆರು ಮಂದಿ ವಶಕ್ಕೆ
ಮಂಗಳೂರು, : ನಗರದ ತಣ್ಣೀರುಬಾವಿ ಬಳಿಯ ತೋಟ ಬೆಂಗರೆ ಎಂಬಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಏಳು ಮಂದಿ ಭಾಗಿಯಾಗಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ.
ನವೆಂಬರ್ 18ರಂದು ಈ ಘಟನೆ ನಡೆದಿದ್ದು, ಯುವತಿ ನೀಡಿದ ದೂರಿನ ಮೇಲೆ ಇಂದು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ದೂರಿನ ಹಿನ್ನೆಲೆಯಲ್ಲಿ ಕಾರ್ಯಚರಿಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ತೋಟ ಬೆಂಗ್ರೆ ಕಡಲ ತೀರಕ್ಕೆ ವಿಹಾರಕ್ಕಾಗಿ ಬಂದಿದ್ದ ಬಂಟ್ವಾಳ ಮೂಲದ ಯುವಜೋಡಿ ಮೇಲೆ ಏಳು ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಯುವತಿಯನ್ನು ಸಾಮೂಹಿಕ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಲಾಗಿದೆ. ವಾರದ ಹಿಂದೆ ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಂಟ್ವಾಳದ ಸಮೀಪದ ಯುವತಿ ಕಾರ್ಖಾನೆ ಯೊಂದರಲ್ಲಿ ಕೂಲಿಗೆ ಹೋಗುತ್ತಿದ್ದಳು. ಆಕೆ ತನ್ನ ಸ್ನೇಹಿತನೊಂದಿಗೆ ನ.18ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೋಟ ಬೆಂಗರೆಗೆ ಬಂದಿದ್ದಳು.ಅಲ್ಲಿ ಇಬ್ಬರೂ ಒಟ್ಟಾಗಿ ಹೋಗುತ್ತಿದ್ದಾಗ ತಂಡವೊಂದು ಅಡ್ಡಗಟ್ಟಿ ಇಬ್ಬರನ್ನೂ ಬೆದರಿಸಿದ್ದಾರೆ. ಅಲ್ಲದೆ ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಎಳೆದೊಯ್ದು ದೌರ್ಜನ್ಯ ನಡೆಸಿದ್ದಾರೆ. ಏಳು ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
