ಮಂಗಳೂರು:  ಮಗುಚಿ ಬಿದ್ದ ಮೀನುಗಾರಿಕೆ ದೋಣಿ – ಆರು ಮಂದಿ ನಾಪತ್ತೆ -Vishwanews24

Featured, ಉಡುಪಿ

ಮಂಗಳೂರು:  ಮಗುಚಿ ಬಿದ್ದ ಮೀನುಗಾರಿಕೆ ದೋಣಿ – ಆರು ಮಂದಿ ನಾಪತ್ತೆ

ಉಳ್ಳಾಲ: ಮೀನುಗಾರಿಕೆಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ದೋಣಿ ಮಗುಚಿದೆ. ಪರಿಣಾಮ 6 ಮಂದಿ ನಾಪತ್ತೆಯಾಗಿದ್ದಾರೆ‌.

ಈ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಬೋಳಾರ ಮೂಲದ ಶ್ರೀರಕ್ಷಾ ಎಂಬ ಬೋಟ್ ದುರಂತಕ್ಕೀಡಾಗಿದೆ. ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದಾಳದ ಮೀನುಗಾರಿಕೆಗೆ ನಿನ್ನೆ ಸೋಮವಾರ (ನ. 30) ಈ ಬೋಟ್ ತೆರಳಿತ್ತು. ಮೀನು ತುಂಬಿಕೊಂಡು ವಾಪಸ್ ಬರುವಾಗ ಗಾಳಿಗೆ ಮಗುಚಿಕೊಂಡು ಬಿದ್ದಿದೆ.

ಸೋಮವಾರ ನಸುಕಿನ ಜಾವ ಬೋಳಾರದ ಶ್ರೀ ರಕ್ಷಾ ಮೀನುಗಾರಿಕಾ ಬೋಟ್‌ನಲ್ಲಿ 22 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು ರಾತ್ರಿ ವಾಪಾಸ್‌ ಬರಬೇಕಾಗಿತ್ತು. ಆದರೆ ಉಳ್ಳಾಲದ ಪಶ್ಚಿಮ ಭಾಗದ ಹಲವು ನಾಟಿಕಲ್ ಮೈಲ್ ದೂರದಲ್ಲಿ ದೋಣಿ ಮಗುಚಿ ಬಿದ್ದಿದೆ.

ಇತರೆ ಮೀನುಗಾರಿಕಾ ಬೋಟ್‌ನವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು 14 ಮಂದಿ ಡೆಂಗೀ ಮೂಲಕ ದಡ ಸೇರುತ್ತಿದ್ದರೆ 6 ಮಂದಿ ನಾಪತ್ತೆಯಾಗಿದ್ದಾರೆ.

ಮೀನಿನ ಸಂಗ್ರಹ ಅಧಿಕವಾದ ಹಾಗೂ ಭಾರೀ ಗಾಳಿ ಬೀಸಿದ ಪರಿಣಾಮ ಈ ದೋಣಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.