ಮಂಗಳೂರು: 2 ಕೋಟಿ ಮೌಲ್ಯದ ರಕ್ತಚಂದನ ವಶ – ಆರೋಪಿಗಳ ಬಂಧನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಆಂಧ್ರಪ್ರದೇಶದಿಂದ ಥೈಲ್ಯಾಂಡ್‌ಗೆ ಅಕ್ರಮವಾಗಿ ರಕ್ತಚಂದನವನ್ನು ಸಾಗಾಟ ಮಾಡಲೆಂದು ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಗೋಡೌನ್ ಒಂದರಲ್ಲಿ ವಿದೇಶಕ್ಕೆ ಸಾಗಿಸಲು ಸಂಗ್ರಹಿಟ್ಟಿದ್ದ ರಕ್ತಚಂದನವನ್ನು ಪಣಂಬೂರು ಪೊಲೀಸರು ಹಾಗೂ ಪಣಂಬೂರು ಉಪವಿಭಾಗದ ನಿಗ್ರಹದಳ ವಶಕ್ಕೆ ಪಡೆದು ಐವರನ್ನು ತಂಡ ಬಂಧಿಸಿದೆ.

ಬಂಧಿತರನ್ನು ಕಲ್ಲಾಪು ಪೆರ್ಮನ್ನೂರು ನಿವಾಸಿ ತಬ್ರೇಜ್ (36), ಫಾರೂಕ್ (45) ಹುಸೈನ್ ಕುಂಜಿ (45) ಕಾವೂರಿನ ರಾಕೇಶ್ ಶೆಟ್ಟಿ (44) ಉಳ್ಳಾಲ ತೊಕ್ಕೊಟ್ಟು ನಿವಾಸಿ ಲೋಹಿತ್, ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ, ಬೆಂಗಳೂರು ನಿವಾಸಿ ಪ್ರದೀಪ್ ಎಂಬಾತ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ಎರಡು ಕೋಟಿ ರೂ. ಮೌಲ್ಯದ ನಾಲ್ಕು ಟನ್ ರಕ್ತ ಚಂದನ, ಎರಡು ಕಾರು ಒಂದು ಟೆಂಪೋ ಹಾಗೂ 7 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಎಸ್ಟೇಟ್‍ನ ಕಟ್ಟಡವೊಂದರಲ್ಲಿ ಅಕ್ರಮವಾಗಿ ರಕ್ತಚಂದನವನ್ನು ದಾಸ್ತಾನು ಇರಿಸಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪಣಂಬೂರು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 4 ಸಾವಿರ ಕೆಜಿ ರಕ್ತಚಂದನ ಪತ್ತೆಯಾಗಿದೆ.

ಆರೋಪಿಗಳು ಈ ರಕ್ತ ಚಂದನವನ್ನು ಮಂಗಳೂರಿನ ಎನ್‍ಎಂಪಿಟಿ ಬಂದರು ಮೂಲಕ ವಿದೇಶಕ್ಕೆ ಸಾಗಿಸಲು ತಯಾರಿ ನಡೆಸಿದ್ದು, ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಆರೋಪಿಗಳಿಂದ ರಕ್ತಚಂದನ, ಬ್ರೀಝಾ, ಮಾರುತಿ ಕಾರು ಸಹಿತ ಒಟ್ಟು 2.20 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.