ಕಾಪು: ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಜನಪ್ರಿಯತೆ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಸಿದ್ಧರಾಮಯ್ಯ ಸರಕಾರದ ವೈಫಲ್ಯ ಎರಡನ್ನೂ ಜನ ತುಲನೆ ಮಾಡಿ ಮತಚಲಾಯಿಸಲಿದ್ದಾರೆ. ಮತದಾರರ ತೀರ್ಪು ಬಿಜೆಪಿಗೆ ಪರವಾಗಿ ಇರಲಿದ್ದು, ಈ ಬಾರಿ ಬಿಜೆಪಿಯ ಗೆಲುವು ನಿಶ್ಚಿತವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಕ್ಷೇತ್ರ ಬಿಜೆಪಿಯ ಮಹಿಳಾ ಜನಪ್ರತಿನಿಧಿಗಳು ಪ್ರಾರಂಭಿಸಿರುವ ಮನೆ ಮನೆ ಭೇಟಿ ಮತ್ತು ಮನೆ ಮನೆ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಪು ಕ್ಷೇತ್ರದಲ್ಲಿ ಬಿಜೆಪಿಯ ಜನಪ್ರತಿನಿಧಿಗಳೇ ಹೆಚ್ಚಾಗಿರುವುದೂ ನಮಗೆ ಲಾಭವಾಗಲಿದೆ. ಬಿಜೆಪಿಯಲ್ಲಿ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಇದುವೇ ಬಿಜೆಪಿಗೆ ವರದಾನವಾಗಲಿದೆ ಎಂದರು.
ಕಾಪು ಕ್ಷೇತ್ರದಲ್ಲಿ ಈ ಹಿಂದೆ ನಾನು ಶಾಸಕನಾಗಿದ್ದಾಗ ಜನರೊಂದಿಗೆ ಇರಿಸಿದ್ದ ಸಂಪರ್ಕವನ್ನೇ ಮತ್ತೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ಅಂದಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ಅದನ್ನೇ ಮತವಾಗಿ ಪರಿವರ್ತಿಸುವ ಕೆಲಸ ಮಹಿಳಾ ಜನಪ್ರತಿನಿಧಿಗಳಿಂದ ನಡೆಯಬೇಕಿದೆ ಎಂದರು.