ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ಗೆ ಬಿಎಸ್ಪಿ ಎಚ್ಚರಿಕೆ
ನವದೆಹಲಿ : ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಬೆದರಿಕೆಯೊಡ್ಡಿದೆ.
ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಸಂದರ್ಭ ಉಭಯ ರಾಜ್ಯಗಳಲ್ಲಿ ‘ಕೆಲವು ಅಮಾಯಕರ’ ಮೇಲೆ ಪ್ರಕರಣ ದಾಖಲಾಗಿದೆ. ಅವುಗಳನ್ನು ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕೂಡಲೇ ರದ್ದುಪಡಿಸಬೇಕು. ಬಾಕಿ ಉಳಿದಿರುವ ಎಲ್ಲ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಬಿಎಸ್ಪಿ ಬೆಂಬಲವನ್ನು ಹಿಂಪಡೆಯಲಿದೆ ಎಂದು ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.
“ಹಿಂದಿನ ಬಿಜೆಪಿ ಸರ್ಕಾರಗಳು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರಪ್ರದೇಶಗಳಲ್ಲಿ ರಾಜಕೀಯ ಹಾಗೂ ಜಾತಿಯನ್ನು ಪರಿಗಣಿಸಿಕೊಂಡು ಮುಗ್ಧ ಜನರ ವಿರುದ್ಧ ಕೇಸುಗಳನ್ನು ಜಡಿದಿತ್ತು. ಇದೀಗ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯಾಚರಿಸುತ್ತಿದೆ. ಹಾಗಾಗಿ ತ್ವರಿತವಾಗಿ ಕಾರ್ಯಪ್ರವೃತ್ತವಾಗಿ ಆ ಪ್ರಕರಣಗಳನ್ನು ಕೈಬಿಡಬೇಕು” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಹೇಳಿದ್ದಾರೆ.
