ಮಲ್ಪೆ ಬೋಟ್ ನಾಪತ್ತೆ ಪ್ರಕರಣ :ಮೀನುಗಾರರು ಸುರಕ್ಷಿತರಾಗಿದ್ದಾರೆ : ಬೊಬ್ಬರ್ಯ ದೈವ ನುಡಿ..
ಉಡುಪಿ : ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ 7 ಜನ ಮೀನುಗಾರರು ಸುರಕ್ಷಿತವಾಗಿದ್ದಾರೆ, ಆದರೇ ಕಷ್ಟದಲ್ಲಿದ್ದಾರೆ, ಉತ್ತರ ಭಾಗದಲ್ಲಿದ್ದಾರೆ ಎಂದು ಬೊಬ್ಬರ್ಯ ದೈವ ನುಡಿ ಕೊಟ್ಟಿದೆ.
ಡಿಸೆಂಬರ್ 13 ರಿಂದ ದಾಮೋದರ್, ರಮೇಶ್, ಹರೀಶ್, ಲಕ್ಷ್ಮಣ್, ರವಿ, ಸತೀಶ್, ಚಂದ್ರಶೇಖರ್ ಎಂಬವರು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.
ನಾಪತ್ತೆಯಾದ 7 ಮಂದಿ ಮೀನುಗಾರರು ಸುರಕ್ಷಿತವಾಗಿದ್ದಾರೆ, ಆದರೇ ಕಷ್ಟದಲ್ಲಿದ್ದಾರೆ ಎಂದು ಮೀನುಗಾರರ ಆರಾಧ್ಯ ಬೊಬ್ಬರ್ಯ ದೈವ ಅಭಯ ನೀಡಿದೆ. ಸರಕಾರವು ಮೀನುಗಾರರನ್ನು ಹುಡುಕುವ ಎಲ್ಲಾ ಪ್ರಯತ್ನಗಳು ಇದುವರೆಗೆ ಯಾವುದೇ ಫಲ ನೀಡದೇ ಇರುವುದರಿಂದ, ಬಡಾನಿಡಿಯೂರು 1 ಮತ್ತು 2ನೇ ಮೊಗವೀರ ಗ್ರಾಮಸಭೆಯ ಸಮಸ್ತ ಮೀನುಗಾರರು ಸ್ಥಳೀಯ ತೊಟ್ಟಂ ಬೊಬ್ಬರ್ಯ ದೈವಸ್ಥಾನದಲ್ಲಿ ದೈವ ದರ್ಶನವನ್ನು ಏರ್ಪಡಿಸಿದ್ದರು.
ಪೊಲೀಸರು, ಸೈನ್ಯದಿಂದ ಮಾತ್ರ ಅವರನ್ನು ಪತ್ತೆ ಹಚ್ಚಬಹುದು. ದಟ್ಟ ಪೊದೆಗಳ ಮಧ್ಯೆ ಕಣ್ಮರೆಯಾಗಿದ್ದಾರೆ. 6-7 ದಿನದೊಳಗೆ ಅವರ ಕುರುಹು ಪತ್ತೆಯಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕು ಎಂದು ದೈವ ಬೊಬ್ಬರ್ಯ ಪಾತ್ರಿ ನುಡಿ ಕೊಟ್ಟಿದ್ದಾರೆ.
ದೈವವು ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ದೈರ್ಯ ನೀಡಿ, ಬೆನ್ನ ಹಿಂದೆ ಕಾಯುತ್ತೇನೆ ಎಂದು ಅಭಯ ನೀಡಿತು.
