ಮಹಾರಾಷ್ಟ್ರದ ದೇವಗಢದಲ್ಲಿ ಮಲ್ಪೆ ಬೋಟ್ ಮುಳುಗಡೆ : 7 ಮೀನುಗಾರರ ರಕ್ಷಣೆ ; ಲಕ್ಷಾಂತರ ರೂಪಾಯಿ ನಷ್ಟ – Vishwanews24
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ವೊಂದು ಮಹಾರಾಷ್ಟ್ರದ ದೇವಗಢ ಸಮೀಪ ಸೋಮವಾರ ತಡರಾತ್ರಿ ಸಂಭವಿಸಿದ ಅವಘಡದಿಂದಾಗಿ ಮುಳುಗಡೆಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಆಳಸಮುದ್ರ ಸ್ಟೀಲ್ಬೋಟ್ ಪಡುತೋನ್ಸೆ ಬೆಂಗ್ರೆ ಹೂಡೆ ನಿವಾಸಿ ದಿನೇಶ್ ತಿಂಗಳಾಯ ಅವರಿಗೆ ಸೇರಿದ ಶಿವರಕ್ಷ ಎಂದು ಗುರುತಿಸಲಾಗಿದೆ.
ಬೋಟಿನಲ್ಲಿದ್ದ ಭಟ್ಕಳ ಮೂಲದ ಮೀನುಗಾರರಾದ ಸುನಿಲ್ ಮಂಜುನಾಥ್, ಸುರೇಶ್ ಮಂಜುನಾಥ್, ಜಗನ್ನಾಥ ರಾಮ, ಪ್ರಶಾಂತ್ ಮೂಡಗಿ, ಗಜೇಂದ್ರ ಪಾಂಡುರಂಗ, ಕೃಷ್ಣ ಮೊಗೇರ, ಲೋಹಿತ್ ಧರ್ಮ ಅವರನ್ನು ಬೇರೊಂದು ಬೋಟ್ನ ಸಹಾಯದಿಂದ ರಕ್ಷಿಸಲಾಗಿದೆ.
ಎ. 6ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿದ ಬೋಟ್ ಮಹಾರಾಷ್ಟ್ರದ ರತ್ನಾಗಿರಿ ಸಮೀಪ ಸುಮಾರು 42 ಮಾರು ಅಳದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಈ ವೇಳೆ ಬೋಟಿನ ಅಡಿಭಾಗಕ್ಕೆ ಯಾವುದೋ ವಸ್ತು ಡಿಕ್ಕಿಯಾಗಿ ಬೋಟ್ನೊಳಗೆ ನೀರು ತುಂಬಿಕೊಂಡಿತು. ತಕ್ಷಣವೇ ಎಚ್ಚೆತ್ತುಕೊಂಡ ಮೀನುಗಾರರು ಸಮೀಪದಲ್ಲಿರುವ ಬೋಟ್ನವರಿಗೆ ಮಾಹಿತಿ ನೀಡಿದರು.
ಆ ನಂತರ ಶಿವತೇಜಸ್, ವರಸಿದ್ದಿ, ಹನುಮ ಸಾನಿಧ್ಯ ಮತ್ತು ರಾಧಾಂಬಿಕ ಹೆಸರಿನ ಬೋಟ್ಗಳ ಸಹಾಯದಿಂದ ಮುಳುಗಡೆಯಾಗುತ್ತಿದ್ದ ಶಿವರಕ್ಷ ಬೋಟನ್ನು ಎಳೆದು ತರಲಾಯಿತು. ಆದರೆ ಸುಮಾರು 34ಮಾರು ಆಳದೂರದಲ್ಲಿ ದೇವಗಡ ಸಮೀಪ ಎಳೆದು ತರುತ್ತಿದ್ದಾಗ ಬೋಟ್ ಸಂಪೂರ್ಣ ಮುಳುಗಡೆಗೊಂಡಿತು ಎನ್ನಲಾಗಿದೆ.
