ಮಹಾರಾಷ್ಟ್ರ ವಿಧಾನಸಭೆ ಚುನಾವಣೆ : ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಮುಂದುವರಿಕೆ -Vishwanews24
ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಮತ್ತೆ ಮುಂದುವರಿಯಲಿದೆ.
ಎನ್‌ಸಿಪಿ ಹಾಗೂ ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಬರ ಮಾಡಿಕೊಂಡ ನಂತರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ಉಭಯ ಪಕ್ಷಗಳು ಒಟ್ಟಿಗೆ ಚುನಾವಣೆ ಎದುರಿಸಲಿವೆ. ಈ ಬಾರಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಹಿಂದಿನ ದಾಖಲೆಗಳನ್ನು ನಮ್ಮ ಮೈತ್ರಿ ಮುರಿಯಲಿದೆ’ ಎಂದರು.
ಇತ್ತೀಚೆಗೆ ಎನ್‌ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ. ಪಕ್ಷ ತೊರೆದು ಬಂದವರಿಗೆ ಟಿಕೆಟ್ ನೀಡಬೇಕಾದ ಒತ್ತಡದಲ್ಲಿರುವ ಬಿಜೆಪಿ ಈ ಬಾರಿ ಶಿವಸೇನಾ ಜೊತೆ ಮೈತ್ರಿಗೆ ಮುಂದಾಗುವುದಿಲ್ಲ ಎಂಬ ವದಂತಿ ಇತ್ತು. ಫಡಣವೀಸ್ ಅವರ ಈ ಹೇಳಿಕೆಯಿಂದ ಇಂತಹ ಎಲ್ಲ ವದಂತಿಗೆ ತೆರೆಬಿದ್ದಿದೆ.
ಈ ಎರಡೂ ಪಕ್ಷಗಳು 2014ರಲ್ಲಿ ಪ್ರತ್ಯೇಕವಾಗಿಯೇ ಚುನಾವಣೆಯನ್ನು ಎದುರಿಸಿದ್ದವು. ಫಲಿತಾಂಶ ಹೊರ ಬಿದ್ದ ನಂತರ ಸರ್ಕಾರ ರಚನೆಗಾಗಿ ಎರಡೂ ಪಕ್ಷಗಳು ಕೈಜೋಡಿಸಿವೆ.
