ಮಾಜಿ ಪ್ರಧಾನಿ ವಾಜಪೇಯಿ ತೀವ್ರ ಅನಾರೋಗ್ಯದಿಂದ ಏಮ್ಸ್ ಆಸ್ಪತ್ರೆಗೆ ದಾಖಲು
ನವದೆಹಲಿ: ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ 93 ವರ್ಷದ ವಾಜಪೇಯಿ ಅವರು ಹಲವು ವರ್ಷಗಳಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ವಾಜಪೇಯಿ 2001ನೇ ಇಸವಿಯಲ್ಲಿ ಮುಂಬೈನ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಮಂಡಿ ಚಿಪ್ಪು ಬದಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2009ರಲ್ಲಿ ಪಾರ್ಶ್ವ ವಾಯುವಿಗೆ ತುತ್ತಾದ ವಾಜಪೇಯಿ ಸ್ಪಷ್ಟವಾಗಿ ಮಾತನಾಡುವ ಶಕ್ತಿ ಕಳೆದುಕೊಂಡರು. ಸದ್ಯಕ್ಕೆ ವ್ಹೀಲ್ ಚೇರ್ ಮಾತ್ರ ಬಳಸುವ ವಾಜಪೇಯಿ ಅವರ ನೆನಪಿನ ಶಕ್ತಿಯೂ ಕುಂದಿದೆ ಎನ್ನಲಾಗಿದೆ.
ದೀರ್ಘಕಾಲೀನ ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದು, ಇತ್ತೀಚಿಗೆ ಯಾವ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿರಲಿಲ್ಲ. ಅಲ್ಲದೆ, ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ದೆಹಲಿಯ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮಾತ್ರವೇ ಮನೆಯಿಂದ ಹೊರಗೆ ಬರುವಷ್ಟು ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ.
