ಮುಂಗಾರು ಮೇಘಸ್ಪೋಟ ಮೊದಲ ದಿನವೇ ಮುಳುಗಿದ ಕರಾವಳಿ

Featured, ಉಡುಪಿ, ದಕ್ಷಿಣ ಕನ್ನಡ

ಮಂಗಳೂರು/ಉಡುಪಿ: ಮೆಕುನು ಚಂಡಮಾರುತದ ಪ್ರಭಾವ ತಗ್ಗಿದ ಬೆನ್ನಲ್ಲೇ ಮಂಗಳವಾರ ಕರಾವಳಿಗೆ ಅಬ್ಬರಿಸಿ ಕಾಲಿಟ್ಟ ಮುಂಗಾರು ಮಾರುತಕ್ಕೆ ಅವಿಭಜಿತ ಜಿಲ್ಲೆ ಅಕ್ಷರಶಃ ಬೆಚ್ಚಿದ್ದು,ಇಡೀ ಮಂಗಳೂರು ನಗರ ಮುಳುಗೆದ್ದಿದೆ. ಭಾರಿ ಮಳೆ ಜತೆಗೆ ಉಡುಪಿಯಲ್ಲಿ ಬಿರುಗಾಳಿ ಆರ್ಭಟದಿಂದಾಗಿ ಅಪಾರ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತ್ಯೇಕ ಮಳೆ ಸಂಬಂಧಿ ಅವಘಡಗಳಲ್ಲಿ ಮೂವರು ಜೀವಬಿಟ್ಟಿದ್ದಾರೆ.

ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಪೂರ್ವ ಮುಂಗಾರು ಚುರುಕುಗೊಂಡಿದ್ದರೂ ಸೋಮವಾರ ರಾತ್ರಿ ಬಳಿಕದ ಚಿತ್ರಣ ಮಳೆಯ ರೌದ್ರ ಸ್ವರೂಪ ನೆನಪಿಸಿದೆ. ಎರಡೂ ಜಿಲ್ಲೆಗಳ ಕರಾವಳಿ ಭಾಗದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಮತ್ತು ನಗರ ಪ್ರದೇಶದ ಪ್ರಮುಖ ರಸ್ತೆಗಳ ಸಹಿತ ತಗ್ಗುಪ್ರದೇಶ ಜಲಾವೃತಗೊಂಡಿದೆ. ಮಂಗಳೂರಿನಲ್ಲಿ ಮಂಗಳ ವಾರ ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಮಳೆ ಸಾಯಂಕಾಲ ದವರೆಗೂ ಧಾರಾಕಾರವಾಗಿ ಸುರಿದಿದೆ.

ಕರ್ನಾಟಕದ ಹಲವೆಡೆ ಮಳೆಯಿಂದ ತೊಂದರೆಗೆ ಈಡಾಗಿರುವವರ ಸುರಕ್ಷತೆಗೆ ಪ್ರಾರ್ಥಿಸುತ್ತೇನೆ. ಹಾನಿಗೀಡಾದ ಪ್ರದೇಶಕ್ಕೆ ನೆರವು ನೀಡುವ ಕುರಿತು ಅಧಿಕಾರಿಗಳೊಂದಿಗೆ ರ್ಚಚಿಸಿದ್ದೇನೆ.

ಪ್ರಧಾನಿ ಮೋದಿ