ದ.ಕ ಜಿಲ್ಲೆಯನ್ನು ಮುಂದಿನ ಐದು ವರ್ಷಗಳ ಅಭಿವೃದ್ಧಿಯಲ್ಲಿ ನಂ.1 ರೂಪಿಸುತ್ತೇವೆ :ನಳಿನ್ ಕುಮಾರ್ ಕಟೀಲ್ -Vishwanews24

Featured, ದಕ್ಷಿಣ ಕನ್ನಡ

ಮೂಡುಬಿದಿರೆ: ಕಳೆದ ಐದು ವರ್ಷದಲ್ಲಿ ಬಿಜೆಪಿ ಸ್ಥಳೀಯಾಡಳಿತ, ವಿಧಾನಸಭೆ, ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಮುಕ್ತವಾಗುತ್ತಿದೆ. ಚುನಾಯಿತ ಎಲ್ಲ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು. ಕಾರ್ಯಕರ್ತರು ಕೇಂದ್ರ ಸರ್ಕಾರದ ಆಡಳಿತವನ್ನು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದ.ಕ ಜಿಲ್ಲೆ ಲೋಕಸಭಾ ಕ್ಷೇತ್ರವನ್ನು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ವಿಷಯದಲ್ಲಿ ನಂ.1 ರೂಪಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.

ಸಂಸದರಾಗಿ ಮೂರನೇ ಬಾರಿಗೆ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಹಾಗೂ ಮೂಡುಬಿದಿರೆ ಪುರಸಭೆ ಹಾಗೂ ಮೂಲ್ಕಿ ನಗರಸಭೆಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇದು ಕೇವಲ ಸಂಸದನಿಗೆ ಮಾಡಿದ ಅಭಿನಂದನೆಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯ, ಜನಪರ ನಡೆಯನ್ನು ಮೆಚ್ಚಿದ ಮತದಾರರ, ಬಿಜೆಪಿಯ ಸರ್ಕಾರ, ಧ್ಯೇಯೋದ್ಧೇಶಗಳನ್ನು ಜನರಿಗೆ ತಲುಪಿಸಿದ ಕಾರ್ಯಕರ್ತರಿಗೆ ನೀಡಿದ ಅಭಿನಂದನೆ. ಜಿಲ್ಲೆಯ ಶೇ.80ರಷ್ಟು ಆಡಳಿತ ಬಿಜೆಪಿ ಪಕ್ಷದ ಕೈಯಲ್ಲಿದ್ದು, ಜನರಿಗೆ ಉತ್ತಮ ಆಡಳಿತ ನೀಡೋಣ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ದ.ಕ ಜಿಲ್ಲಾ ಉಪಾಧ್ಯಾಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಜಯಾನಂದ ಮೂಲ್ಕಿ, ,ಬಿಜೆಪಿ ಮುಖಂಡರಾದ ಕೆ.ಆರ್ ಪಂಡಿತ್, ಬಾಹುಬಲಿ ಪ್ರಸಾದ್, ಎಂ.ಎಸ್ ಕೋಟ್ಯಾನ್, ಭುವನಾಭಿರಾಮ ಉಡುಪ, ರಮಾನಾಥ ಅತ್ತರ್, ಶಾಂತಿ ಪ್ರಸಾದ್ ಹೆಗ್ಡೆ, ಜಾಯ್ಲಸ್ ತಾಕೋಡೆ, ರಾಜೇಶ್ ಮಲ್ಯ, ಸೂರಜ್ ಜೈನ್, ಹರೀಶ್ ಎಂ.ಕೆ, ನಗರ ಹಾಗೂ ಪುರಸಭೆಗೆ ಆಯ್ಕೆಯಾದ ಅಭ್ಯರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.