ಮುಂದೊಂದು ದಿನ ನಾವು ಚಂದ್ರನನ್ನು ತಲುಪುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ : ಪ್ರಧಾನಿ -Vishwanews24
ಬೆಂಗಳೂರು: ಮುಂದೊಂದು ದಿನ ನಾವು ಚಂದ್ರನನ್ನು ತಲುಪುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ವಿಜ್ಞಾನದಲ್ಲಿ ಸೋಲೆಂಬ ಪ್ರಶ್ನೆಯೇ ಇಲ್ಲ. ಸತತ ಪ್ರಯತ್ನದಿಂದ ಸಾಧನೆ ಖಂಡಿತ ಸಾಧ್ಯ. ನೀವು ನಿಮ್ಮ ಪ್ರಯೋಗಗಳನ್ನು ಮುಂದುವರೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ.
ವಿಜ್ಞಾನದಲ್ಲಿ ಪ್ರಯೋಗಗಳು ನಡೆಯುತ್ತಿರಬೇಕು. ವಿಜ್ಞಾನಕ್ಕೆ ಎಂದಿಗೂ ಸೋಲಿಲ್ಲ. ಪ್ರಯತ್ನದಿಂದಲೇ ಸಾಧನೆ ಸಾಧ್ಯ. ಖಂಡಿತ ಭವಿಷ್ಯದಲ್ಲಿ ಚಂದ್ರನನ್ನು ನಾವು ತಲುಪಿಯೇ ತಲುಪುತ್ತೇವೆ. ಇಸ್ರೋ ವಿಜ್ಞಾನಿಗಳ ಕುಟುಂಬಸ್ಥರ ಪ್ರೋತ್ಸಾಹಕ್ಕೆ ನಾವು ಕೃತಜ್ಞರು. ವಿಜ್ಞಾನಿಗಳೇ ನನಗೆ ಪ್ರೇರಣೆ. ನಿಮ್ಮ ಪರಿಶ್ರಮ ವ್ಯರ್ಥವಾಗಿಲ್ಲ. ನೀವು ಈಗ ಕಲಿತ ಪಾಠದಿಂದ ಇನ್ನಷ್ಟು ದೃಢವಾಗಿ ಗುರಿಯನ್ನು ತಲುಪುತ್ತೀರಿ. ಫಲಿತಾಂಶದ ಬಗ್ಗೆ ಯೋಚಿಸದೆ ನಿರಂತರವಾಗಿ ಪ್ರಯತ್ನ ಮುಂದುವರೆಸಿ ಎಂದಿದ್ದಾರೆ. ನಿಮ್ಮ ಕಣ್ಣುಗಳು ಎಲ್ಲವನ್ನೂ ಹೇಳುತ್ತಿದ್ದವು: ನಿಮ್ಮ ಶ್ರಮವನ್ನು ಭಾರತವೇ ಹಾಡಿಹೊಗಳುತ್ತಿದೆ. ರಾತ್ರಿ ನಿಮ್ಮ ಮನಸ್ಥಿತಿ ಅರ್ಥ ಮಾಡಿಕೊಂಡಿದ್ದೇನೆ. ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ನಾನಿದ್ದೆ. ಆಗ ನಿಮ್ಮ ಕಣ್ಣುಗಳು, ನಿಮ್ಮ ಮುಖಭಾವವೇ ನಿಮ್ಮ ನೋವನ್ನು ಹೇಳುತ್ತಿತ್ತು. ಹೀಗಾಗಿ ನಾನು ನಿಮ್ಮೊಂದಿಗೆ ಹೆಚ್ಚುಕಾಲ ಇರಲಿಲ್ಲ. ಆದರೆ, ಇಂದು ಮತ್ತೆ ನಿಮ್ಮೊಂದಿಗೆ ಕಾಲ ಕಳೆಯಬೇಕೆಂದು ಬಂದಿದ್ದೇನೆ. ನೀವೆಲ್ಲರೂ ನನಗೆ ಸ್ಫೂರ್ತಿಯಾಗಿದ್ದೀರಿ. ಇಡೀ ಭಾರತರ ನಿಮ್ಮೊಂದಿಗಿದೆ ಎಂದು ಮೋದಿ ಹೇಳಿದ್ದಾರೆ.
ನಿಮ್ಮ ಪರಿಶ್ರಮದ ಬಗ್ಗೆ ಭಾರತೀಯರಿಗೆ ಗೊತ್ತಿದೆ. ಅಡೆತಡೆಗಳಿಂದ ಉತ್ಸಾಹ ಕಡಿಮೆಯಾಗಿಲ್ಲ, ಹೆಚ್ಚಾಗಿದೆ. ಚಂದ್ರನನ್ನು ಮುಟ್ಟುವ ನಮ್ಮ ಆಸೆ ಇಮ್ಮಡಿಯಾಗಿದೆ. ನೀವು ಮಾಡಿರುವ ಕೆಲಸ ಈವರೆಗೆ ಯಾರೂ ಮಾಡಿಲ್ಲ. ಇಂದಿನ ಕಲಿಕೆ ನಮ್ಮನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ. ಚಂದ್ರನ ಮೇಲೆ ನೀರಿದೆ ಎಂದು ತೋರಿಸಿದ್ದು ನೀವು. ನನಗಿಂತ ಹೆಚ್ಚು ಶ್ರಮ, ಹೆಚ್ಚು ಗುರಿ ನಿಮಗಿದೆ. ನಿಮ್ಮಿಂದ ಪ್ರೇರಣೆ ಪಡೆಯಲು ನಾನಿಲ್ಲಿಗೆ ಬಂದಿದ್ದೇನೆ ಎಂದು ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ.
