ಮುಂಬೈ-ಮಂಗಳೂರು ಕೊಂಕಣ ರೈಲ್ವೆ ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗುವುದು : ಪಿಯೂಷ್‌ ಗೋಯಲ್‌ -Vishwanews24

Featured, ರಾಷ್ಟ್ರ ನ್ಯೂಸ್

ಪಣಜಿ: ಮುಂಬೈ-ಮಂಗಳೂರು ಕೊಂಕಣ ರೈಲ್ವೆ ಮಾರ್ಗವನ್ನು 11,000 ಕೋಟಿ ರೂ ವೆಚ್ಚದಲ್ಲಿ ವಿದ್ಯುದೀಕರಣಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೋವಾ ಮಾರ್ಗವಾಗಿ ಮುಂಬೈ-ಮಂಗಳೂರು ಕೊಂಕಣ ರೈಲ್ವೆ ಮಾರ್ಗವನ್ನು ಅಂದಾಜು 11,000 ಕೋಟಿ ರೂ. ವೆಚ್ಚದಲ್ಲಿ ವಿದ್ಯುದೀಕರಣಗೊಳಿಸಲಾಗುವುದು. ವಿಶ್ವದಲ್ಲೇ ಅತ್ಯುತ್ತಮ ಸೇವೆ ಮತ್ತು ದರ್ಜೆಯನ್ನಾಗಿಸಲು ರೈಲ್ವೆ ವಲಯದಲ್ಲಿ 2030ರ ವೇಳೆಗೆ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.

ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೊಳ್ಳಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರವಾಸೋದ್ಯಮ ತಾಣವಾದ ಗೋವಾದಲ್ಲಿ ರೈಲು ಸಂಪರ್ಕ ವೃದ್ದಿಸಲು ಒತ್ತು ನೀಡಲಾಗಿದೆ. ಸಾಂಪ್ರದಾಯಿಕ ಹಳೆ ಬೋಗಿಗಳನ್ನು ಅತ್ಯಾಧುನಿಕ ಬೋಗಿಗಳೊಂದಿಗೆ ಬದಲಾಯಿಸುವ ಕಾರ್ಯ ವೇಗದಿಂದ ಸಾಗಿದೆ ಎಂದು ಹೇಳಿದರು.

ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದಡಿ ದೇಶೀಯವಾಗಿಯೇ ವಿಶ್ವದರ್ಜೆಯ ಬೋಗಿಗಳ ಉತ್ಪಾದನೆಯಾಗುತ್ತಿದೆ ಎಂದು ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.