ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾದಿಂದ ಶೀಘ್ರವೇ ರಾಜ್ಯಾದ್ಯಂತ ಪ್ರತಿಭಟನೆ!

Featured, ರಾಜ್ಯ ನ್ಯೂಸ್

ರೈತರ ಸಾಲಮನ್ನಾ , ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗಟ್ಟುವಿಕೆ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಇದೇ 30ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆ ಜೂ.30ರಿಂದ ಜುಲೈ 15ರವರೆಗೆ ಒಟ್ಟು ಆರು ತಂಡಗಳಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನಾ ಕಾರ್ಯಕ್ರಮ ನಡೆಯಲಿದೆ.

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಿರುವ ಬಿಜೆಪಿ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಮೂಲಕ ಪ್ರಾರಂಭದಲ್ಲೇ ದೋಸ್ತಿ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ. ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಂಚರಿಸಲಿರುವ ಈ ತಂಡವು ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ಪ್ರವಾಸ ಆರಂಭಿಸಲಿರುವ ಯುವ ಮೋರ್ಚಾದ ನಾಯಕರು ರೈತರ ಸಾಲಮನ್ನಾವನ್ನೇ ಪ್ರಧಾನವಾಗಿಟ್ಟುಕೊಂಡು ಹೋರಾಟ ನಡೆಸಲಿದೆ.  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆಗೂ ಮುನ್ನ ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ ಜನತೆಗೆ ನೀಡಿದ ಆಶ್ವಾಸನೆ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರು ನಡೆದುಕೊಳ್ಳುತ್ತಿರುವ ರೀತಿನೀತಿಗಳ ಬಗ್ಗೆಯೂ ಜನತೆಗೆ ರೈತ ಮೋರ್ಚಾ ಮನವರಿಕೆ ಮಾಡಲಿದೆ.