ಮೋದಿಯನ್ನು ಸೋಲಿಸುವುದು ಭ್ರಮೆ ಹಾಗೂ ವಿಪಕ್ಷಗಳ ಹಗಲುಗನಸು ,ಅವರಂತೆ ಪ್ರಸಿದ್ಧಿ ಪಡೆದ ನಾಯಕರು ಇಡೀ ಜಗತ್ತಿನಲ್ಲಿಯೇ ಇಲ್ಲ : ಅಮಿತ್‌ ಶಾ – vishwanews24

Featured, ರಾಷ್ಟ್ರ ನ್ಯೂಸ್

ದೆಹಲಿ: ಪ್ರಧಾನಿ ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್‌ ಮತ್ತು ಇತರ ಎಲ್ಲಾ ಪಕ್ಷಗಳು ಒಂದಾಗಿವೆ. ಇದು ಖಂಡಿತ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹೇಳಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಮಾತನಾಡಿ, ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ಪ್ರಧಾನಿ ನರೇಂದ್ರ ಮೋದಿ ಅವರಂತೆ ಪ್ರಸಿದ್ಧಿ ಪಡೆದ ನಾಯಕರು ಇಡೀ ಜಗತ್ತಿನಲ್ಲಿಯೇ  ಇಲ್ಲ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರು ವೇದಿಕೆಯಲ್ಲಿ 20–25 ನಾಯಕರನ್ನು ಸೇರಿಸಿದಾಕ್ಷಣ ಮೋದಿ ಅವರನ್ನು ಪ್ರಧಾನಿಯಾಗದಂತೆ ತಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ನೂರು ಕೋಟಿ ಭಾರತೀಯರು ಮೋದಿ ಅವರ ಬೆನ್ನಿಗೆ ಇರುವಾಗ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗದಂತೆ ತಡೆಯುವುದು ಮಹಾಘಟಬಂಧನ್‌ ನಾಯಕರಿಂದ ಸಾಧ್ಯವಿಲ್ಲ ಎಂದು ಶಾ ಸವಾಲು ಹಾಕಿದರು.

ಅಯೋಧ್ಯೆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಾಗುತ್ತಿದೆ. ಆದಷ್ಟು ಬೇಗನೆ ಪ್ರಕರಣ ಮುಕ್ತಾಯವಾಗಬೇಕು ಎಂದು ನಾವು ಬಯಸುತ್ತೇವೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಿಜೆಪಿ ಬಯಸುತ್ತದೆ. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್‌ ಪ್ರಕರಣವನ್ನು ಮತ್ತಷ್ಟು ವಿಳಂಬಿಸಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನದ ಮಾರ್ಗದಲ್ಲಿ ರಾಮ ಮಂದಿರ ನಿರ್ಮಾಣವನ್ನು ನಾವು ಬಯಸುತ್ತೇವೆ ಎಂದು ಘೋಷಿಸಿದರು.

ನಾವು ಬಡತನ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾದರೆ, ಮಹಾಘಟಬಂಧನ್‌ ನಾಯಕರು ಪ್ರಧಾನಿ ಮೋದಿ ಅವರನ್ನು ತೆಗೆಯಲು ಹೊರಟಿದ್ದಾರೆ ಎಂದು ಹೇಳಿದರು.

2014ರ ವರೆಗೂ ದೇಶದಲ್ಲಿ ಒಟ್ಟು 60 ಸಾವಿರ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳೇ ಇರಲಿಲ್ಲ. ಆದರೆ ಮೋದೀ ಅವರು ಈ ಎಲ್ಲ ಕುಟುಂಬಗಳಿಗೆ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ಒದಗಿಸಿದರು. ‘ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆಯಡಿ ದೇಶ ಕಾಯುವ ವೀರ ಯೋಧರಿಗೆ ನರೇಂದ್ರ ಮೋದಿ ಸರಕಾರ ಗೌರ ಸಲ್ಲಿಸಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರಕಾರ ದೇಶದ ಮಹಿಳೆಯರಿಗೆ ಘನತೆಯೊಂದಿಗೆ ಬದುಕುವ ಹಕ್ಕನ್ನು ನೀಡಿದೆ. ಅದಕ್ಕಾಗಿ 90 ಲಕ್ಷ ಶೌಚಾಲಯಗಳನ್ನೂ ನಿರ್ಮಿಸಲಾಗಿದೆ. ದೇಶದ ಭದ್ರತೆಗಾಗಿ ಮೋದಿ ಸರಕಾರ ಕಠಿಣ ಪರಿಶ್ರಮ ವಹಿಸಿದೆ ಎಂದು ಶಾ ನುಡಿದರು.

ಜನಸಂಘದ ದಿನಗಳಿಂದಲೂ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯದಲ್ಲಿ ಧ್ರುವ ನಕ್ಷತ್ರದಂತೆ ಬೆಳಗಿದರು. ಬಿಜೆಪಿಯ ಸಂಸ್ಥಾಪಕ ಅಧ್ಯಕ್ಷರಾಗಿ ಪಕ್ಷವನ್ನು ಸದೃಢವಾಗಿ ಬೆಳೆಸಿದರು. ವಾಜಪೇಯಿ ಮತ್ತು ಆಡ್ವಾಣಿ ಅವರಷ್ಟು ಕಠಿಣ ಪರಿಶ್ರಮವನ್ನು ಯಾರೂ ಮಾಡಿರಲಿಲ್ಲ ಎಂದು ನನ್ನ ಭಾವನೆ. ಅವರ ಪರಿಶ್ರಮದಿಂದ ಬಿಜೆಪಿ ಇಂದು ದೇಶದ ಮೂಲೆ ಮೂಲೆಗೂ ಹಬ್ಬಿದೆ ಎಂದು ಅಮಿತ್ ಶಾ ಹೇಳಿದರು.