ಮೋದಿ ಸರಕಾರ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರುವ ವಿಶ್ವಾಸವಿದೆ : ಪೇಜಾವರ ಶ್ರೀ
ಉಡುಪಿ: ಬಹುಮತವನ್ನು ಹೊಂದಿದ ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೆ ತರುವುದು ಸಾಧ್ಯ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಡಿ. 2ರಂದು ಉಡುಪಿಯಲ್ಲಿ ನಡೆಯುವ ಜನಾಗ್ರಹ ಸಭೆ ಅಂಗವಾಗಿ ಶ್ರೀಕೃಷ್ಣಮಠದ ಬಳಿಯ ನ್ಯೂ ಯಾತ್ರಿ ನಿವಾಸ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಅಯೋಧ್ಯೆ ಕರಸೇವಕರ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪಕ್ಷಾತೀತವಾಗಿದ್ದು ಇದು ರಾಷ್ಟ್ರ ಹಾಗೂ ಸಮಗ್ರ ಹಿಂದೂ ಜನತೆಗೆ ಸಂಬಂಧಿಸಿದ್ದಾಗಿದೆ. ಉತ್ತರ ಪ್ರದೇಶದಲ್ಲೂ ಬಿಜೆಪಿ ಸರಕಾರವಿದೆ ಎಂದರು. ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೂ ಜಂಟಿ ಸದನ ಸಮಿತಿ ಸಭೆ ಕರೆದು ನಿರ್ಣಯ ಕೈಗೊಂಡರೆ ಇದರ ವಿರುದ್ಧ ಅನ್ಯರು ಕೋರ್ಟಿಗೆ ಹೋಗುವುದು ಕಷ್ಟ. ಮುಸಲ್ಮಾನರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿದ್ದಾರೆ. ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದರು.
ನಾಲ್ಕೂವರೆ ವರ್ಷದಿಂದ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ಏನೂ ಮಾಡಿಲ್ಲ. ಈಗ ಉತ್ತಮ ಅವಕಾಶ ಒದಗಿಬಂದಿದೆ. ಸಾಧು, ಸಂತರು ಹಾಗೂ ಕೇಂದ್ರ ಸರಕಾರದ ಮುಂದೆ ಸದವಕಾಶವಿದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಹಿಂದೆ ಹೆಜ್ಜೆ ಇಡಬಾರದು ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿವಾದ ಕೋರ್ಟಿನ ಹೊರಗೆ ಮಾತುಕತೆ ಮೂಲಕ ಇತ್ಯರ್ಥವಾದರೆ ಸಂತೋಷ. ಇಲ್ಲವಾದರೆ ನ್ಯಾಯಾಲಯ ವಿಳಂಬ ಮಾಡದೆ ಬೇಗ ತೀರ್ಪನ್ನಾದರೂ ಕೊಡಲಿ ಎಂದರು.
ಇವೆರಡೂ ಸಾಧ್ಯವಾಗದಿದ್ದರೆ ಕೇಂದ್ರ ಸರಕಾರ ವಿಧೇಯಕ ಇಲ್ಲಾ ಸುಗ್ರೀವಾಜ್ಞೆಯನ್ನಾದರೂ ತರಬೇಕು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇದನ್ನು ಯಾರೂ ವಿರೋಧಿಸುವ ಕಾರ್ಯ ಮಾಡಲಾರರು. ಕಾಂಗ್ರೆಸ್ ವಿರೋಧಿಸಿದರೆ ಪ್ರತಿಕೂಲ ಪರಿಣಾಮದ ಆತಂಕ ಅದಕ್ಕಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಸಭೆಯಲ್ಲಿ ಹಿರಿಯ ಮುಖಂಡ ಸೋಮಶೇಖರ ಭಟ್, ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್, ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಹಿಂಪ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ, ನಗರಾಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
