ಯಡಿಯೂರಪ್ಪರಂತೆ ಹೋರಾಟದ ಮೂಲಕವೇ ರಾಜಕೀಯವಾಗಿ ಬೆಳೆಯುವೆ : ಬಿ.ವೈ. ವಿಜಯೇಂದ್ರ -Vishwanews24

Featured, ರಾಜ್ಯ ನ್ಯೂಸ್

ದಾವಣಗೆರೆ: ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ನಡೆದಷ್ಟು ಪಿತೂರಿ, ಷಡ್ಯಂತ್ರ ಬೇರೆ ಯಾವ ರಾಜಕಾರಣಿಯ ವಿರುದ್ಧವೂ ನಡೆದಿಲ್ಲ ಎಂದು ಬಿಜೆಪಿ ಯುವ ಘಟಕದ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದ ಹೈಸ್ಕೂಲ್‌ ಮೈದಾನದಲ್ಲಿ ನಡೆಯುತ್ತಿರುವ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಮಾತ್ರ ಯಾರಿಗೂ ಕೇಡು ಬಯಸದೇ ರಾಜಕಾರಣ ಮಾಡುತ್ತಾ ಬಂದರು. ಹಾಗಾಗಿ ಅವರು ಮತ್ತೆ ಮುಖ್ಯಮಂತ್ರಿಯಾಗಲು ಜನ ಬಯಸಿದರು. ರಾಜ್ಯದಲ್ಲಿ ಭೀಕರ ಬರಗಾಲ ಇತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 48 ಗಂಟೆಗಳಲ್ಲಿಯೇ ಮಳೆ ಬಂತು. ಆದರೆ ಮಳೆ ಜಾಸ್ತಿಯಾಗಿದ್ದರಿಂದ ಪ್ರವಾಹ ಉಂಟಾಯಿತು. ಒಂದು ತಿಂಗಳ ಕಾಲ ಯಾವುದೇ ಸಚಿವರಿಲ್ಲದಿದ್ದರೂ ಅವರೊಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿ ಸಂತ್ರಸ್ತರ ನೆರವಿಗೆ ಧಾವಿಸಿದರು ಎಂದರು.

‘ಅವಕಾಶ ಸಿಕ್ಕಿದ್ದರೆ ವರಣಾ ಕ್ಷೇತ್ರದಿಂದ ಗೆದ್ದು ಶಾಸಕನಾಗುತ್ತಿದ್ದೆ. ಆದರೆ ಯಡಿಯೂರಪ್ಪರಂತೆ ಹೋರಾಟ ಮಾಡಿ ಬೆಳವಣಿಗೆ ಹೊಂದಬೇಕು ಎಂಬುದು ರಂಭಾಪುರಿ ಸ್ವಾಮೀಜಿ ಅವರ ಆಶೀರ್ವಾದವಾಗಿತ್ತು. ಹಾಗಾಗಿ ಹೋರಾಟದ ಮೂಲಕವೇ ರಾಜಕೀಯವಾಗಿ ಬೆಳೆಯುವೆ’ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.