ಯಾವಾಗ ಬೇಕಾದರೂ ಸರ್ಕಾರ ಬಿದ್ದು ಹೋಗಬಹುದು , ಮಧ್ಯಂತರ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸಿದ್ಧ : ದಿನೇಶ್ ಗುಂಡೂರಾವ್ -Vishwanews24
ತುಮಕೂರು: ‘ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಸ್ಥಿರತೆ ಇದೆ. ಯಾವಾಗ ಬೇಕಾದರೂ ಸರ್ಕಾರ ಬಿದ್ದು ಹೋಗಬಹುದು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸನ್ನದ್ಧವಾಗುತ್ತಿದೆ. ವಾರ್ಡ್, ಬ್ಲಾಕ್‌ವಾರು ಪಕ್ಷವನ್ನು ಸಂಘಟಿಸಲು ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ಕೇಂದ್ರ ನಾಯಕರಿಗೆ ಅತೃಪ್ತಿ ಇದೆ. ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಯಡಿಯೂರಪ್ಪ ಕೇಳಿದರೂ ಮನವಿಗೆ ಕೇಂದ್ರ ಸರ್ಕಾರ ಮತ್ತು ಅವರ ಪಕ್ಷದ ಕೇಂದ್ರ ನಾಯಕರು ಸ್ಪಂದಿಸಿಲ್ಲ’ ಎಂದು ದೂರಿದರು.
‘ಮುಂದಿನ ವರ್ಷ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅವುಗಳ ಜತೆಯೇ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವ ಉದ್ದೇಶ ಬಿಜೆಪಿ ಕೇಂದ್ರ ನಾಯಕರಿಗೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಬಹಳ ದಿನ ಇರುವುದಿಲ್ಲ’ ಎಂದು ಹೇಳಿದರು.
