ಯಾವುದೇ ಕಾರಣಕ್ಕೂ ಮೀನುಗಾರರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ : ಕೋಟ ಶ್ರೀನಿವಾಸ ಪೂಜಾರಿ -Vishwanews24

Featured, ಉಡುಪಿ, ರಾಜ್ಯ ನ್ಯೂಸ್

ಬೆಂಗಳೂರು: ಯಾವುದೇ ಕಾರಣಕ್ಕೂ ಮೀನುಗಾರರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ನಡೆಯುತ್ತಿರುವ ಬಂದ್‍ಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ ಅಂತ ಕಿಡಿಕಾರಿದರು.

ಸಾಗರಮಾಲಾ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿದೆ. 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಅಂದು ಶಾಸಕರಾಗಿದ್ದ ಸತೀಶ್ ಶೈಲ್ ಕೂಡ ಶಂಕು ಸ್ಥಾಪನೆ ಮಾಡಿದ್ದರು. ಅಂದು ವಿರೋಧ ಮಾಡದ ಕಾಂಗ್ರೆಸ್ ಮುಖಂಡರು ಇಂದು ವಿರೋಧ ಮಾಡುತ್ತಿರುವುದು ಯಾಕೆ ಅಂತ ಪೂಜಾರಿ ಪ್ರಶ್ನೆ ಮಾಡಿದರು.

ಇದು ಬಿಜೆಪಿ ವಿರೋಧದ ಪ್ರತಿಭಟನೆ, ಸುಮ್ಮನೆ ರಾಜಕೀಯಕ್ಕಾಗಿ ಕಾಂಗ್ರೆಸ್ಸಿನವರು ಬಂದ್ ಮಾಡಿಸುತ್ತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ಅಲ್ಲದೆ ಸಾಂಪ್ರದಾಯಿಕ ಮತ್ತು ಯಾಂತ್ರಿಕ ಮೀನುಗಾರಿಕೆಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು.

ರವೀಂದ್ರನಾಥ್ ಟ್ಯಾಗೂರ್ ಕಡಲತೀರಕ್ಕೆ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಮೀನುಗಾರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಅಂತ ಮನವಿ ಮಾಡಿದರು. ಅಗತ್ಯ ಬಿದ್ದರೆ ಮೀನುಗಾರರು ಮತ್ತು ಜನ ಪ್ರತಿನಿಧಿಗಳ ಗೊಂದಲ ನಿವಾರಣೆಗೆ ವಿಧಾನಸೌಧದಲ್ಲಿಯೇ ಸಭೆ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.