ರನ್‌ವೇ ಬಿಟ್ಟು ಫೆಸಿಫಿಕ್ ಸರೋವರದಲ್ಲಿ ಇಳಿದ ವಿಮಾನ ; ಪ್ರಯಾಣಿಕರ ರಕ್ಷಣೆ
ಪಲಿಕಿರ್: ತಾಂತ್ರಿಕ ದೋಷದಿಂದಾಗಿ 47 ಜನರಿದ್ದ ಪ್ರಯಾಣಿಕ ವಿಮಾನವೊಂದು ರನ್ ವೇಯಿಂದ ಮುನ್ನುಗ್ಗಿ ಸಮುದ್ರಕ್ಕೆ ಬಿದ್ದಿರುವ ಘಟನೆ ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರವಾದ ಮೈಕ್ರೋನೇಷ್ಯಾದ ಛುಕ್ ಪ್ರದೇಶದಲ್ಲಿ ನಡೆದಿದೆ.
ಕಳೆದ ಶುಕ್ರವಾರ ತಾಂತ್ರಿಕ ದೋಷದಿಂದಾಗಿ ಬೋಯಿಂಗ್ 737 ವಿಮಾನವು, ನಿಲ್ದಾಣದ ರನ್ ವೇ ನಿಂದ ಮುನ್ನುಗ್ಗಿ ಸಮುದ್ರಕ್ಕೆ ಬಿದ್ದಿದೆ. ಕೂಡಲೇ ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳು ವಿಮಾನದಲ್ಲಿದ್ದ ಎಲ್ಲಾ 47 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಲ್ಲದೇ ವಿಮಾನ ಸಮುದ್ರಕ್ಕೆ ನುಗ್ಗುತ್ತಲೇ ಕೆಲವು ಪ್ರಯಾಣಿಕರು ವಿಮಾನದ ತುರ್ತು ಬಾಗಿಲನ್ನು ತೆರೆದು, ಸಮುದ್ರದಲ್ಲಿ ಈಜಿ ದಡ ಸೇರುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಏರ್ ನ್ಯೂಗಿನಿಯಾ ವಿಮಾನಯಾನ ಸಂಸ್ಥೆ ತನಿಖೆ ಕೈಗೊಂಡಿದೆ. ಅಲ್ಲದೇ ವೆನೋ ವಿಮಾನದ ಸುತ್ತಮುತ್ತ ಭಾರೀ ಮಳೆ ಬಿದ್ದ ಹಿನ್ನೆಲೆಯಲ್ಲಿ ಪೈಲೆಟ್‍ಗಳು ರನ್‍ವೇ ಅನ್ನು ಗುರುತಿಸುವಲ್ಲಿ ವಿಫಲರಾಗಿದ್ದೇ ಅವಘಡಕ್ಕೆ ಕಾರಣ ಎಂಬುದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ವಿಮಾನ ಸಮುದ್ರಕ್ಕೆ ಬಿದ್ದು, ಅರ್ಧ ಮುಳುಗಿದ್ದರೂ ನಮಗೆ ವಿಮಾನ ಮುಳುಗುತ್ತಿರುವ ವಿಚಾರ ಗೊತ್ತೆ ಆಗಿರಲಿಲ್ಲ. ರಕ್ಷಣಾ ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ನಮಗೆ ವಿಮಾನ ಅವಘಡ ಸಂಭವಿಸಿರುವ ಬಗ್ಗೆ ತಿಳಿಯಿತು ಎಂದು ಭಾರೀ ದುರಂತದಿಂದ ಪಾರಾದ ಪ್ರಯಾಣಿಕರು ಹೇಳಿದ್ದಾರೆ.
