ರಾಜಕೀಯ ಮಾಡದೇ ಒಂದಾಗಿ ರೈತ ಸಮುದಾಯವನ್ನು ಸದೃಢಗೊಳಿಸೋಣ : ವಿಪಕ್ಷಗಳಿಗೆ ಪ್ರಧಾನಿ ಮೋದಿ -Vishwanews24

Featured, ರಾಷ್ಟ್ರ ನ್ಯೂಸ್

ರಾಜಕೀಯ ಮಾಡದೇ ಒಂದಾಗಿ ರೈತ ಸಮುದಾಯವನ್ನು ಸದೃಢಗೊಳಿಸೋಣ : ವಿಪಕ್ಷಗಳಿಗೆ ಪ್ರಧಾನಿ ಮೋದಿ -Vishwanews24

ವಿಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನೇ ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದಿದೆ..

ಹೊಸದಿಲ್ಲಿ: ರೈತರ ಭವಿಷ್ಯವನ್ನು ಸುಭದ್ರಗೊಳಿಸಿ ಅವರ ಜೀವನವನ್ನು ಸುಂದರವಾಗಿಸಲೆಂದೇ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ರಾಜಕೀಯ ಬೆರೆಸದೆ ರೈತರ ಅಭ್ಯುದಯಕ್ಕಾಗಿ ಒಂದಾಗುವಂತೆ ಪ್ರಧಾನಿ ಮೋದಿ ವಿಪಕ್ಷಗಳಿಗೆ ಕೈಮುಗಿದು ಮನವಿ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಮಧ್ಯಪ್ರದೇಶದ ಕಿಸಾನ್ ಕಲ್ಯಾಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೃಷಿಕರ ಜೀವನಮಟ್ಟ ಸುಧಾರಣೆಗಾಗಿ ವಿಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನೇ ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು.

ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದ್ದು, ಇದರ ಸಂಪೂರ್ಣ ಕ್ರೆಡಿಟ್ ನಿಮಗೆ ಸಲ್ಲುತ್ತದೆ ಎಂದು ಹೇಳಿದ ಪ್ರಧಾನಿ, ಈ ವಿಷಯದಲ್ಲಿ ರಾಜಕೀಯ ಮಾಡದೇ ಒಂದಾಗಿ ರೈತ ಸಮುದಾಯವನ್ನು ಸದೃಢಗೊಳಿಸೋಣ ಎಂದು ವಿಪಕ್ಷಗಳಿಗೆ ಮನವಿ ಮಾಡಿದರು.

ಕೃಷಿ ಕಾನೂನುಗಳನ್ನು ಒಂದೇ ರಾತ್ರಿಯಲ್ಲಿ ಜಾರಿಗೊಳಿಸಲಾಗಿಲ್ಲ. 20-30 ವರ್ಷಗಳಿಂದ ಮಾಡಲಾದ ಸುದೀರ್ಘ ಅಧ್ಯಯನವನ್ನು ಪರಿಗಣನೆಗೆ ತೆಗೆದುಕೊಂಡು ಈ ಕಾನೂನನ್ನು ಜಾರಿಗೊಳಿಸಲಾಗುತ್ತಿದೆ. ಇದು ನಿಜಕ್ಕೂ ರೈತ ಸಮುದಾಯಕ್ಕೆ ಬಹಳಷ್ಟು ಅನುಕೂಲತೆಗಳನ್ನು ಕಲ್ಪಿಸಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ರಾಜಕೀಯ ಪಕ್ಷಗಳು ರೈತರನ್ನು ಪ್ರಚೋದಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ ಪ್ರಧಾನಿ ಮೋದಿ, ಕೃಷಿ ಕಾನೂನುಗಳ ಬಗ್ಗೆ ಸುಳ್ಳುಗಳನ್ನು ಹೇಳಿ ರೈತರನ್ನು ಪ್ರತಿಭಟನೆಗೆ ಪ್ರೋತ್ಸಾಹಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಯಾವುದೇ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ರದ್ದು ಮಾಡುವುದಿಲ್ಲ ಎಂದು ಮತ್ತೊಮ್ಮೆ ಭರವಸೆ ನೀಡಿದ ಪ್ರಧಾನಿ ಮೋದಿ, ಈ ಕುರಿತು ಅಂಕಿ ಅಂಶಗಳನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಸ್ತುತಪಡಿಸಿದರು.

ಎಂಎಸ್‌ಪಿಯನ್ನು ರದ್ದು ಮಾಡುವುದೇ ನಮ್ಮ ಉದ್ದೇಶವಾಗಿದ್ದರೆ ಸ್ವಾಮಿನಾಥನ್ ಆಯೊಗದ ವರದಿಯನ್ನೇಕೆ ನಾವು ಜಾರಿಗೆ ತರುತ್ತಿದ್ದೇವು ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ಎಂಎಸ್‌ಪಿ ಕುರಿತು ರೈತರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.