ರಾಜ್ಯದಲ್ಲಿ ನಮ್ಮದೇ ಸರ್ಕಾರ, ಪಕ್ಷ ಬಲಿಷ್ಠವಾಗಿದ್ದು, ಭವಿಷದ್ಯದಲ್ಲೂ ಬಿಜೆಪಿಯೇ ಜಯಭೇರಿ ಬಾರಿಸುವಂತೆ ನೋಡಿಕೊಳ್ಳುತ್ತೇವೆ : ನಳಿನ್ ಕಟೀಲ್ -Vishwanews24

Featured, ರಾಜ್ಯ ನ್ಯೂಸ್

ರಾಯಚೂರು: ಬಸಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುವುದು ಶತಸಿದ್ಧ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಸಿಂಧನೂರು ಸೇರಿದಂತೆ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಸಿಂಧನೂರಿನ ನಗರದ ಖಾಸಗಿ ರೆಸಿಡೆನ್ಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂತಕಾಲದ ಬಗ್ಗೆ ನಾವು ಯೋಚಿಸುವುದಿಲ್ಲ. ಭವಿಷದ್ಯದಲ್ಲೂ ಬಿಜೆಪಿಯೇ ಜಯಭೇರಿ ಬಾರಿಸುವಂತೆ ನೋಡಿಕೊಳ್ಳುತ್ತೇವೆ. ವಿಜಯೇಂದ್ರ ಅವರು ನಮ್ಮ ಪಕ್ಷದಲ್ಲಿ ಪ್ರಮುಖರು. ಯಡಿಯೂರಪ್ಪ ಅವರು ನಮ್ಮ ನಾಯಕರು. ಆಯಾ ಪ್ರದೇಶಗಳಲ್ಲಿ ಪ್ರಾಬಲ್ಯ ಆಧರಿಸಿ ವಿಜಯೇಂದ್ರ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅವರಿಗೆ ಬಸವ ಕಲ್ಯಾಣ ಉಸ್ತುವಾರಿ ಕೊಟ್ಟರೆ, ರವಿಕುಮಾರ್ ಹಾಗೂ ಸಚಿವ ವಿ.ಸೋಮಣ್ಣ ಅವರಿಗೆ ಮಸ್ಕಿ ಚುನಾವಣೆಯ ಉಸ್ತುವಾರಿ ನೀಡಲಾಗಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಗೆಲುವಿಗಾಗಿ ಪಕ್ಷ ಎಲ್ಲರನ್ನೂ ಬಳಸಿಕೊಳ್ಳುತ್ತದೆ ಎಂದರು.

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಸಿಎಂ ಹಾಗೂ ಕೇಂದ್ರ ನಾಯಕರು ಮಾತನಾಡಿದ್ದಾರೆ. ಅವರು ಏನು ಕೇಳಬೇಕೋ ಕೇಳಿದ್ದಾರೆ. ದೆಹಲಿಗೆ ಹೋದವರು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಎಂದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಗೊಂದಲಕ್ಕೆ ಆಸ್ಪದವಿಲ್ಲ. ಬಳ್ಳಾರಿಯ ಬೆಳವಣಿಗೆ ಗಮನಿಸಲಾಗಿದ್ದು, ಕರೆದು ಮಾತನಾಡಿಸುತ್ತೇವೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ, ಪಕ್ಷ ಬಲಿಷ್ಠವಾಗಿದ್ದು, ಎಲ್ಲವನ್ನೂ ಸರಿಪಡಿಸುವ ಸಾಮರ್ಥ್ಯವಿದೆ ಎಂದರು.