ರಾತ್ರಿ ನಿದ್ದೆಗೆಟ್ಟು ವಾಯುಪಡೆ ದಾಳಿ ಬಗ್ಗೆ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದ ಪ್ರಧಾನಿ ಮೋದಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ,: ಇಡೀ ಸರ್ಜಿಕಲ್ ದಾಳಿ ಪ್ರಧಾನಿ ಮೋದಿ ಕಣ್ಗಾವಲಿನಲ್ಲೇ ನಡೆದಿದೆ. ಸೋಮವಾರ ರಾತ್ರಿ ಖಾಸಗಿ ಕಾರ್ಯಕ್ರಮ ಮುಗಿಸಿದ ಅವರು, ಅನಂತರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡರು. ಕಾರ್ಯಾಚರಣೆ ವೇಳೆ ಪ್ರಧಾನಿ ಮೋದಿ ರಾತ್ರಿ ಇಡೀ ನಿದ್ದೆಗೆಟ್ಟು ಅಧಿಕಾರಿಗಳಿಂದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

 

ಸರ್ಜಿಕಲ್ ಸ್ಚ್ರೈಕ್ 2.0 ಎಂದೇ ಹೇಳಲಾಗುತ್ತಿರುವ ವಾಯುಸೇನೆಯ ಪಿಒಕೆ ಮೇಲಿನ ದಾಳಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಮುಂಜಾನೆವರೆಗೂ ನಿದ್ರೆ ಮಾಡಿರಲಿಲ್ಲವಂತೆ. ಈ ಬಗ್ಗೆ ಸರ್ಕಾರದ ಅಧಿಕೃತ ಮೂಲಗಳೇ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ರಾತ್ರಿ ಇಡೀ ಎಚ್ಚರವಾಗಿದ್ದು ಅಧಿಕಾರಿಗಳಿಂದ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದರು. ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ಸಾಥ್ ನೀಡಿದ್ದರು ಎನ್ನಲಾಗಿದೆ.

ಪುಲ್ವಾಮ ಉಗ್ರ ದಾಳಿ ಬಳಿಕ ಗಡಿಯಲ್ಲಿದ್ದ ಉಗ್ರರು ಭಾರತ ದಾಳಿ ಮಾಡುತ್ತದೆ ಎಂಬ ಭಯದಿಂದ ಉಗ್ರರ ಸ್ವರ್ಗವೆಂದೇ ಖ್ಯಾತಿಗಳಿಸಿರುವ ಬಾಲಾಕೋಟ್ ಉಗ್ರ ಕ್ಯಾಂಪ್ ಗೆ ತೆರಳಿದ್ದರು. ಈ ಮಾಹಿತಿ ಪಡೆದ ವಾಯುಸೇನೆ ಇದೇ ಸರಿಯಾದ ಸಂದರ್ಭ ಎಂದು ಇಂದು ಮುಂಜಾನೆ ದಾಳಿ ಮಾಡಿ ಬರೊಬ್ಬರಿ 350ಕ್ಕೂ ಹೆಚ್ಚು ಉಗ್ರರರನ್ನು ಹೊಡೆದುರುಳಿಸಿದೆ.

ಪ್ರಧಾನಿ ಮೋದಿ ಅವರು ದೆಹಲಿಯ ದಕ್ಷಿಣ ಬ್ಲಾಕ್ ನಲ್ಲಿರುವ ರಾಷ್ಟ್ರಪತಿ ಭವನದ ಕೋಣೆಯಲ್ಲಿ ಕುಳಿತು ವಾಯುಪಡೆ ಸಂಪೂರ್ಣ ಕಾರ್ಯಾಚರಣೆ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದರು. ಕಾರ್ಯಾಚರಣೆ ಯಶಸ್ವಿಯಾಗಿ ಭಾರತೀಯ ವಾಯುಸೇನಾ ಸಿಬ್ಬಂದಿಗಳೆಲ್ಲರೂ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿದ್ದಾರೆ ಎಂದ ಬಳಿಕವಷ್ಟೆ ಪ್ರಧಾನಿ ಮೋದಿ 4.30ರ ಸುಮಾರಿಗೆ ತಮ್ಮ ನಿವಾಸದ ತೆರಳಿದರು. ಅದಕ್ಕೂ ಮೊದಲು ಯುದ್ಧ ವಿಮಾನಗಳ ನೇತೃತ್ವ ವಹಿಸಿಕೊಂಡ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.