ರಾಹುಲ್ ಗಾಂಧಿ ಅವರು ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ ಅದರಲ್ಲೂ ಕರ್ನಾಟಕದಿಂದಲೇ ಚುನಾವಣೆಗೆ ಸ್ಪರ್ಧಿಸಲಿ : ದಿನೇಶ್ ಗುಂಡೂರಾವ್
ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಅವರು ಕೇವಲ ಉತ್ತರ ಭಾರತದಿಂದ ಸ್ಪರ್ಧೆ ಮಾಡುವುದಲ್ಲ. ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ ಅದರಲ್ಲೂ ಕರ್ನಾಟಕದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಆಹ್ವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಳೆದ 5 ವರ್ಷಗಳ ಸಾಧನೆ ಶೂನ್ಯವಾಗಿದೆ. ಪ್ರಧಾನಿಗಳು ಕೇವಲ ಭಾಷಣ ಮತ್ತು ಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕಪ್ಪು ಹಣ ತರುವುದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವಂತಿಲ್ಲ. ಏಕೆಂದರೇ ಪ್ರಶ್ನೆ ಮಾಡಿದರೆ ದೇಶ ದ್ರೋಹಿಗಳು ಎಂದು ಹೇಳುತ್ತಿದ್ದಾರೆ.
ನೀವು ಕರ್ನಾಟಕದಿಂದ ಸ್ಪರ್ಧಿಸುವುದನ್ನು ನಾವು ಸ್ವಾಗತಿಸಲಿದ್ದೇವೆ. ಇದು ದಕ್ಷಿಣ ಭಾರತದಲ್ಲೇ ಕಾಂಗ್ರೆಸ್ ಗೆ ಸ್ಪೂರ್ತಿ ತಂದುಕೊಡಲಿದೆ. ಕಾಂಗ್ರೆಸ್ ಕಷ್ಟದಲ್ಲಿದ್ದಾಗಲೆಲ್ಲಾ ಕರ್ನಾಟಕ ನೆರವು ನೀಡಿದೆ. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಕೂಡ ರಾಜ್ಯದಿಂದ ಸ್ಪರ್ಧಿಸಿದ್ದರು ಎಂದು ಪತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
