ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ನಮ್ಮ ಅಭ್ಯಂತರವಿಲ್ಲ : ದೇವೇಗೌಡ
ಈಗಾಗಲೇ ಸಿಡಬ್ಲುಸಿ ಸಭೆಯಲ್ಲಿ ಕಾಂಗ್ರೆಸ್ನಿಂದ ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ ಎಂದು ನಿರ್ಧಾರ ಮಾಡಲಾಗಿತ್ತು. ಆದರೆ, ಈ ನಿರ್ಣಯವನ್ನು ಮಿತ್ರಪಕ್ಷಗಳು ಬೆಂಬಲಿಸುತ್ತವೆಯೇ ಅಥವಾ ವಿರೋಧ ವ್ಯಕ್ತಪಡಿಸುತ್ತವೆಯೇ ಎಂಬ ಅನುಮಾನವೂ ಇತ್ತು. ಅದಕ್ಕೆಲ್ಲ ತೆರೆ ಎಳೆದಿರುವ ಹಿರಿಯ ರಾಜಕಾರಣಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡರು ಜೆಡಿಎಸ್ನ ಬೆಂಬಲವನ್ನು ಕಾಂಗ್ರೆಸ್ಗೆ ನೀಡಿದ್ದಾರೆ.ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ನಮ್ಮ ಅಭ್ಯಂತರವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮುಂದುವರಿಯಲಿದೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಚ್ಚರಿ ಮೂಡಿಸಿದ್ದಾರೆ.
ಮಹಾಮೈತ್ರಿಯಲ್ಲಿ ಅತ್ಯಂತ ಹಿರಿಯ ರಾಜಕಾರಣಿ ಮತ್ತು ಮಾಜಿ ಪ್ರಧಾನಿಯೂ ಆಗಿರುವ ದೇವೇಗೌಡರೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳೊಂದಿಗೆ ಸೇರಿ ಕಣಕ್ಕಿಳಿಯುವ ಮೂಲಕ ತೃತೀಯರಂಗದ ಪಕ್ಷಗಳು ಒಗ್ಗಟ್ಟಾಗಿ ಎನ್ಡಿಎ ವಿರುದ್ಧ ನಿಲ್ಲಲು ತಂತ್ರ ರೂಪಿಸಿದ್ದವು. ಆದರೆ ಮುಂದಿನ ಅವಧಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಅಭ್ಯಂತರವಿಲ್ಲ ಎನ್ನುವ ಮೂಲಕ ಬೆಂಬಲ ಸೂಚಿಸಿರುವ ದೇವೇಗೌಡರ ನಡೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಈ ಮೈತ್ರಿ ಲೋಕಸಭಾ ಚುನಾವಣೆಗೂ ಮುಂದುವರಿಯಲಿದೆ ಎಂದು ದೇವೇಗೌಡರು ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ
