ಲೋಕಸಭಾ ಚುನಾವಣೆ: ಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯದಿಂದ ನಿವೃತ್ತಿ : ನವಜೋತ್ ಸಿಂಗ್ ಸಿಧು -Vishwanews24
ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಂದ ರಾಷ್ಟ್ರೀಯತೆಯ ಪಾಠವನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.
ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್ನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರನ್ನು ಹೊಗಳಿದ ಸಿಧು, ಸೋನಿಯಾ ಗಾಂಧಿಯವರಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ 10 ವರ್ಷ ಆಡಳಿತ ನಡೆಸಲು ಸಾಧ್ಯವಾಯಿತು ಎಂದರು.
70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ನಡೆಸಿಲ್ಲ ಎಂದು ಪದೇಪದೆ ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದರು. ಒಂದು ಚಿಕ್ಕ ಸೂಜಿಯಿಂದ, ವಿಮಾನದವರೆಗಿನಷ್ಟು ಅಭಿವೃದ್ಧಿಯನ್ನು ಕಾಂಗ್ರೆಸ್ ಅವಧಿಯಲ್ಲೇ ಮಾಡಲಾಗಿದೆ ಎಂದು ಹೇಳಿದರು.
ರಫೇಲ್ ಯುದ್ಧ ವಿಮಾನ ವಿವಾದವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿಗೆ ಕಾರಣವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
