ಲೋಕಸಭೆ ಚುನಾವಣೆಗೆ ​ಕೈ ರಣಕಹಳೆ … ಇಂದು ಹಾವೇರಿಗೆ ರಾಹುಲ್ ಭೇಟಿ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್
ಹಾವೇರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಕಲ ಸಿದ್ಧತೆ ನಡೆದಿದ್ದು, ವಿಶೇಷ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಮಾವೇಶ ನಡೆಯಲಿದೆ. 1.5 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ರಾಹುಲ್ ಜತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿ ಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿವಿಧ ಸಚಿವರು, ಶಾಸಕರು ಪಾಲ್ಗೊಳ್ಳುತ್ತಿದ್ದಾರೆ.

ರಾಹುಲ್ ಗಾಂಧಿ ಪಾಲ್ಗೊಳ್ಳುತ್ತಿರುವ ಸಮಾವೇಶದಲ್ಲಿ ಹಾವೇರಿ, ಗದಗ ಎರಡೂ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಅಭಿಮಾನಿಗಳು ಆಗಮಿಸಲಿದ್ದಾರೆ. ವಿಶೇಷ ಅಂದರೆ ಉತ್ತರ ಪ್ರದೇಶದ ಒಂದು ಭಾಗದ ಉಸ್ತುವಾರಿಯಾಗಿರುವ ಪ್ರಿಯಾಂಕ ಗಾಂಧಿ ಅವರ ಬೃಹತ್ ಪೋಸ್ಟರ್​ಗಳು, ಬ್ಯಾನರ್​ಗಳು ಹಾವೇರಿಯಲ್ಲಿ ರಾರಾಜಿಸುತ್ತಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇಂದು ಸಮಾವೇಶಕ್ಕೆ ರಾಹುಲ್ ಗಾಂಧಿ ಮಧ್ಯಾಹ್ನ 1 ಗಂಟೆಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿಕೊಟ್ಟು ಚುನಾವಣಾ ಪ್ರಚಾರದ ರಣಕಹಳೆ ಮೊಳಗಿಸುತ್ತಿದ್ದಾರೆ. ಮೂರು ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕಲಬುರ್ಗಿಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡು ತೆರಳಿದ್ದಾರೆ. ಈ ಹಿಂದೆ ಹುಬ್ಬಳ್ಳಿಗೂ ಭೇಟಿ ಕೊಟ್ಟಿದ್ದರು. ಒಟ್ಟಾರೆ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲುವುದು ಪ್ರಮುಖವಾಗಿದ್ದು, ಮೇಲಿಂದ ಮೇಲೆ ರಾಷ್ಟ್ರೀಯ ನಾಯಕರು ಭೇಟಿ ಕೊಟ್ಟು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.