ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಸೇನಾಪಡೆಯ ಅತ್ಯುನ್ನತ ಗೌರವ ನೀಡುವುದು ಬಹುತೇಕ ಖಚಿತ -Vishwanews24
ನವದೆಹಲಿ: ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಸಾಹಸಕ್ಕಾಗಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಗೆ ಕೇಂದ್ರ ಸರ್ಕಾರ ವೀರ ಚಕ್ರ ಪದಕ ಗೌರವ ನೀಡುವುದು ಬಹುತೇಕ ಖಚಿತವಾಗಿದೆ.
ವರ್ಧಮಾನ್ ಅವರಿಗೆ ವೀರ್ ಚಕ್ರ ನೀಡಿ ಗೌರವಿಸುವ ಸಾಧ್ಯತೆ ಇದೆ. ಅದೇ ವೇಳೆ ಬಾಲಾಕೋಟ್‌ನಲ್ಲಿ ಜೈಷ್- ಎ- ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಮಿರಾಜ್ -2000 ಫೈಟರ್ ವಿಮಾನದ 5 ಪೈಲಟ್‌ಗಳಿಗೂ ವಾಯುಸೇನೆಯ ಪದಕ ನೀಡಿ ಗೌರವಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಫೆಬ್ರುವರಿ 27ರಂದು ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಪಾಕ್ ವಾಯುಪಡೆಯ ಯುದ್ಧವಿಮಾನಗಳೊಡನೆ ನಡೆದಿದ್ದ ಹೋರಾಟದಲ್ಲಿ ಅಭಿನಂದನ್ ತಮ್ಮ ಮಿಗ್–21 ಯುದ್ಧವಿಮಾನದಿಂದ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಮಿಗ್–21 ಯುದ್ಧವಿಮಾನದಿಂದ ಪಾಕಿಸ್ತಾನದ ಎಫ್–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಘಟನೆ ಇದೇ ಮೊದಲು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2019 ರ ಫೆಬ್ರವರಿ 27 ರಂದು ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ವಾಯುಗಡಿ ಉಲ್ಲಂಘಿಸಿ ಪ್ರವೇಶಿಸಲು ಯತ್ನಿಸಿದ್ದವು. ಈ ಸಂದರ್ಭದಲ್ಲಿ ತಮ್ಮ ಮಿಗ್ 21 ಬೈಸನ್ ಯುದ್ದವಿಮಾನದಲ್ಲಿ ಅವುಗಳನ್ನು ಬೆನ್ನಟ್ಟಿಕೊಂಡು ಹೋಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಎಫ್ 16 ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದ್ದರು. ಬಳಿಕ ಅವರು ವಿಮಾನದಿಂದ ಹೊರಜಿಗಿದಿದ್ದರು. ಆದರೆ, ಅವರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಇಳಿದಿದ್ದರಿಂದ ಪಾಕ್ ಸೇನಾ ಪಡೆ ಅವರನ್ನು ಬಂಧಿಸಿತ್ತು. ಪಾಕ್ ಮೇಲೆ ಜಾಗತಿಕವಾಗಿ ಒತ್ತಡ ಹೇರಿದ್ದ ಭಾರತ, ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿತ್ತು.
