ವಿಶ್ವದ ಅತೀ ಎತ್ತರದ ಸರ್ದಾರ್ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆ ಲಂಡನ್ ಪ್ರಶಸ್ತಿಗೆ ನಾಮ ನಿರ್ದೇಶನ -Vishwanews24
ನವದೆಹಲಿ: ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆ ಲಂಡನ್ ಮೂಲದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಬರೊಬ್ಬರಿ 182 ಮೀಟರ್ ಎತ್ತರದ ‘ಏಕತಾ ಪ್ರತಿಮೆ’, ಬ್ರಿಟನ್ ಮೂಲದ ಇನ್ ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್ ಸಂಸ್ಥೆಯ ಪ್ರಶಸ್ತಿ ಪಟ್ಟಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಈ ಸಂಸ್ಥೆ 2019ನೇ ಸಾಲಿಗೆ ನೀಡುವ ‘ದಿ ಸ್ಟ್ರಕ್ಚರಲ್ ಅವಾರ್ಡ್ಸ್’ಗೆ ಈ ಪ್ರತಿಮೆ ಕೂಡ ನಾಮನಿರ್ದೇಶನವಾಗಿದೆ.
ಇನ್ ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್ ಸಂಸ್ಥೆಯು ವಿಶ್ವದ ಅತ್ಯುತ್ತಮ ರಚನೆಗಳಿಗೆ ಕಳೆದ 52 ವರ್ಷಗಳಿಂದ ಈ ಸಂಸ್ಥೆ ಪ್ರಶಸ್ತಿ ನೀಡುತ್ತಿದೆ.
ಮುಂಬರುವ ನವೆಂಬರ್ 15ಕ್ಕೆ ಲಂಡನ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ.
ಏಕತಾ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ ‘ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಅನಾವರಣ ಮಾಡಿದ್ದರು.
