ವಿಷ ಪ್ರಸಾದ ಪ್ರಕರಣ – ತಬ್ಬಲಿಯಾದ ಮೂವರು ಮಕ್ಕಳಿಗೆ ಆಸರೆಯಾಗಲು ಮುಂದಾದ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆ
ಮಂಗಳೂರು: ಸುಳ್ವಾಡಿ ದೇವಸ್ಥಾನದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶನ ಪ್ರಕರಣದ ದುರಂತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಮೂರು ಮಕ್ಕಳಿಗೆ ಆಳ್ವಾಸ್ ಸಂಸ್ಥೆ ಆಸರೆಯಾಗಲು ಮುಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂವರು ಮಕ್ಕಳನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದು, ಮೂವರು ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಲು ಆಳ್ವಾಸ್ ಸಂಸ್ಥೆ ತೀರ್ಮಾನ ಮಾಡಿದೆ. ಅಷ್ಟೇ ಅಲ್ಲದೇ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದೆ.
ದಂಪತಿಯ ಹಿರಿಯ ಮಗಳು ರಾಣಿಬಾಯಿ ಅವರ ಬಿಎಸ್‌ಸಿ , ಎರಡನೇ ಮಗಳು ಪ್ರಿಯಾಬಾಯಿ ಅವರ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಹಾಗೂ ಮಗ ರಾಜೇಶ್ ನಾಯ್ಕ್‌ನ ಪಿಯುಸಿ ವ್ಯಾಸಂಗವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಮುಂದುವರಿಸುವುದಾದರೆ ಅವರಿಗೆ ಪದವಿ, ಸ್ನಾತಕೋತ್ತರ ಶಿಕ್ಷಣ ಪಡೆಯಲು ಉಚಿತ ವ್ಯವಸ್ಥೆ ಕಲ್ಪಿಸಲಾಗುವುದು. ಹಾಸ್ಟೆಲ್‌ನಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅವರಿಗೆ ಸಂಪೂರ್ಣವಾಗಿ ಉಚಿತವಾಗಿ ಕೊಡುತ್ತೇವೆ. ಅವರ ವ್ಯಾಸಂಗದ ಬಳಿಕ ಅವರಿಗೆ ಉದ್ಯೋಗ ಕಲ್ಪಿಸುವ ಜವಾಬ್ದಾರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಿಭಾಯಿಸುತ್ತದೆ ಎಂದು ಡಾ.ಎಂ ಮೋಹನ ಆಳ್ವ ಮಾಧ್ಯಮದವರಿಗೆ ತಿಳಿಸಿದ್ದಾರೆ.
