ವಿಷ ಪ್ರಸಾದ ಪ್ರಕರಣ ; ಪ್ರಸಾದಕ್ಕೆ ವಿಷ ಹಾಕಿದ್ದು ಅರ್ಚಕ ದೊಡ್ಡಯ್ಯ ; ಪೊಲೀಸ್ ತನಿಖೆ ಅಂತಿಮ ಘಟ್ಟಕ್ಕೆ ..
ಚಾಮರಾಜನಗರ : ಸುಳ್ವಾಡಿಯ ಮಾರಮ್ಮ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಹಾಕಿದ ಘಟನೆಯ ತನಿಖೆ ಅಂತಿಮ ಹಂತ ತಲುಪಿದ್ದು, ಅರ್ಚಕ ದೊಡ್ಡಯ್ಯ ಎಂಬುವರು ತಾವೇ ವಿಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ನಿನ್ನೆ ಅಂಬಿಕಾ ತಾನೇ ವಿಷ ಹಾಕಿಸಿದ್ದಾಗಿ ಒಪ್ಪಿಕೊಂಡಿದ್ದರು. ನಂತರ ಅರ್ಚಕ ದೊಡ್ಡಯ್ಯನೇ ಖುದ್ದಾಗಿ ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಿರುವುದು ಸಾಬೀತಾಗಿದೆ. ಇಂದು ಆರೋಪಿಗಳನ್ನು ಪೊಲೀಸರು ಕೊಳ್ಳೇಗಾಲದ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. ಆರೋಪಿಗಳ ರಕ್ಷಣೆಗೆ ರಾಜಕೀಯ ಒತ್ತಡವಿರುವ ಹಿನ್ನೆಲೆಯಲ್ಲಿ ಕೋರ್ಟ್ ಬಳಿ ಹಾಗೂ ಡಿವೈಎಸ್ಪಿ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಾರಮ್ಮನ ದೇವಸ್ಥಾನದ ಟ್ರಸ್ಟ್ನಲ್ಲಿ ಎರಡು ಬಣಗಳಾಗಿತ್ತು. ಹೇಗಾದರೂ ಮಾಡಿ ಇನ್ನೊಂದು ಬಣಕ್ಕೆ ಕೆಟ್ಟ ಹೆಸರು ತರಬೇಕೆಂಬ ಕೆಟ್ಟ ಆಲೋಚನೆ ಇಮ್ಮಡಿ ಮಹದೇವ ಸ್ವಾಮೀಜಿಯದ್ದಾಗಿತ್ತು. ಅದಕ್ಕಾಗಿ ಪ್ರಸಾದಕ್ಕೆ ವಿಷ ಬೆರೆಸಿದರೆ ಭಕ್ತರಿಗೆ ವಾಂತಿ-ಭೇದಿಯಾಗುತ್ತದೆ. ಇದರಿಂದ ಕಾರ್ಯಕ್ರಮ ಆಯೋಜಕರ ಬಗ್ಗೆ ಜನರಲ್ಲಿ ಅಸಮಾಧಾನ ಮೂಡುತ್ತದೆ. ನಂತರ ದೇವಸ್ಥಾನ ಸಂಪೂರ್ಣವಾಗಿ ತಮ್ಮ ವಶವಾಗುತ್ತದೆ ಎಂದು ಯೋಚಿಸಿ ಈ ವಿಷ ಹಾಕುವ ನಿರ್ಧಾರಕ್ಕೆ ಬಂದಿದ್ದರು ಕಿರಿಯ ಶ್ರೀ ಇಮ್ಮಡಿ ಮಹದೇವ ಸ್ವಾಮೀಜಿ.
ಮಾರಮ್ಮ ದೇವಸ್ಥಾನಕ್ಕೆ ಇತ್ತೀಚೆಗೆ ಲಕ್ಷಾಂತರ ಆದಾಯ ಬರತೊಡಗಿತ್ತು. ಹರಕೆ ರೂಪದಲ್ಲಿ ಬಂದ ಚಿನ್ನಾಭರಣ ಹಾಗೂ ಹಣಕಾಸನ್ನು ಇಮ್ಮಡಿ ಮಹದೇವಸ್ವಾಮಿ ಕೊಂಡೊಯ್ಯುತ್ತಿದ್ದರು. ಇದು ಇನ್ನೊಂದು ಬಣಕ್ಕೆ ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಣದ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಈ ನಡುವೆ ದೇವಸ್ಥಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಮ್ಮಡಿ ಸ್ವಾಮೀಜಿ ಪ್ರಯತ್ನ ನಡೆಸುತ್ತಿದ್ದರು.

