ಶಬರಿಮಲೆಯನ್ನು ಮತ್ತೊಂದು ಅಯೋಧ್ಯೆಯಾಗಲು ಬಿಡುವುದಿಲ್ಲ : ಪ್ರತಿಪಕ್ಷಗಳ ಹೋರಾಟಕ್ಕೆ ಮಣಿಯದ ಕೇರಳ ಸಿಎಂ ಪಿಣರಾಯಿ ವಿಜಯನ್

Featured, ರಾಷ್ಟ್ರ ನ್ಯೂಸ್

ತಿರುವನಂತಪುರಂ: ಶಬರಿಮಲೆಯನ್ನು ಮತ್ತೊಂದು ಅಯೋಧ್ಯೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು  ಹೇಳಿದ್ದಾರೆ.

ಕೇರಳದಲ್ಲಿ ವಿಧಾನಸಭಾ ಅಧಿವೇಶನ ಪ್ರಾರಂಭವಾಗಿತ್ತು. ಈ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸದಸ್ಯರು ಶಬರಿಮಲೆಯಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಪಕ್ಷಗಳ ಹೋರಾಟಕ್ಕೆ ಮಣಿಯದ ಸಿಎಂ ಪಿಣರಾಯ್, ಶಬರಿಮಲೆಯಲ್ಲಿ ಜಾರಿಮಾಡಲಾಗಿರುವ ನಿಷೇಧಾಜ್ಞೆಯನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸುವುದಿಲ್ಲ. ನಾವು ಸುಪ್ರೀಂ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕಾಗಿದೆ. ಶಬರಿಮಲೆಯಲ್ಲಿ ಜಾರಿಯಲ್ಲಿರುವ ಆದೇಶದ ಬಗ್ಗೆ ಹೈ ಕೋರ್ಟ್ ಕೂಡ ಸಮ್ಮತಿ ಸೂಚಿಸಿದೆ. ಹೀಗಾಗಿ ನಿಷೇಧಾಜ್ಞೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಬೆಂಬಲದೊಂದಿಗೆ ಸಂಘ ಪರಿವಾರದವರು ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ. ಯಾವುದೇ ಕಾರಣಕ್ಕೂ ಶಬರಿಮಲೆಯನ್ನು ಮತ್ತೊಂದು ಅಯೋಧ್ಯೆ ಮಾಡಲು ಬಿಡುವುದಿಲ್ಲ ಮತ್ತು ನಿಷೇಧಾಜ್ಞೆಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಪಿಣರಾಯ್ ವಿಜಯನ್ ಅವರು ಖಡಕ್ ಆಗಿ ಹೇಳಿದ್ದಾರೆ.