ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಬಂಧನ ; ಸಿಎಂ ಪಿಣರಾಯಿ ನಿವಾಸದ ಮುಂದೆ ಪ್ರತಿಭಟನೆ

Featured, ರಾಷ್ಟ್ರ ನ್ಯೂಸ್

ಶಬರಿಮಲೆ, : ಶಬರಿಮಲೆ ದೇಗುಲದಲ್ಲಿ ತಡರಾತ್ರಿ ಸುಮಾರು 70 ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಕೇರಳ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ.

ಈ ಹಿಂದಿನ ಹಿಂಸಾತ್ಮಕ ಘಟನೆಗಳನ್ನು ಆಧರಿಸಿ ಶಬರಿಮಲೆಯಲ್ಲಿ ಪೊಲೀಸರು ನಿಷೇಧಾಜ್ಞೆ ಹೇರಿದ್ದು, ರಾತ್ರಿ ವೇಳೆ ಸನ್ನಿಧಾನದಲ್ಲಿ ಯಾರೂ ತಂಗುವಂತಿಲ್ಲ ಎಂದು ಆದೇಶಿಸಿ, ಭಕ್ತರನ್ನು ಬಂಧಿಸಿದ್ದರು. ಆದರೆ ಪೊಲೀಸರ ಈ ನಡೆಯನ್ನು ವಿರೋಧಿಸಿ ಸೋಮವಾರ ರಾಜ್ಯಾದ್ಯಂತ ಮತ್ತೆ ಪ್ರತಿಭಟನೆ ಆರಂಭವಾಗಿದೆ.

ರವಿವಾರ ರಾತ್ರಿ ನಡೆದ ಘಟನೆಯನ್ನು ಖಂಡಿಸಿ ಸಂಘಪರಿವಾರದ ಕಾರ್ಯಕರ್ತರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಿರುವನಂತಪುರದಲ್ಲಿರುವ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಕೊಚ್ಚಿ, ಕೋಯಿಕ್ಕೋಡ್, ಮಲ್ಲಪ್ಪುರಂ, ಅರನಮೂಲ,ಕೊಲ್ಲಂ, ಕಾಲಾಡಿ ಹಾಗೂ ಇಡುಕ್ಕಿ ಸಹಿತ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿಂದಿನ ಹಿಂಸಾಚಾರ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸನ್ನಿಧಾನಂ ಹಾಗೂ ದೇವಸ್ಥಾನ ಒಳಗೆ ಭಕ್ತಾದಿಗಳಿಗೆ ಕಠಿಣ ನಿರ್ಬಂಧ ಹೇರುತ್ತಿದ್ದಾರೆ. ರಾತ್ರಿ ವೇಳೆ ದೇವಸ್ಥಾನದಲ್ಲಿ ತಂಗುವುದಕ್ಕೆ ಅವಕಾಶವನ್ನು ನಿರಾಕರಿಸುತ್ತಿದ್ದಾರೆ.