ಶಿವಮೊಗ್ಗ : 144 ಸೆಕ್ಷನ್ ಜಾರಿಯಾಗಿದ್ದರೂ ಮೃತನ ಶವಯಾತ್ರೆ ಮಾಡಲು ಅವಕಾಶ ಕಲ್ಪಿಸಿದ್ದು ಸರಿಯಲ್ಲ : ಸಿದ್ದರಾಮಯ್ಯ ಅಸಮಾಧಾನ
ಈ ಶವಯಾತ್ರೆಯನ್ನು ರಾಜ್ಯ ಸರ್ಕಾರದ ಪ್ರಾಯೋಜಿತ ಶವಯಾತ್ರೆ ಎನ್ನಬೇಕಾಗುತ್ತದೆ..
ಪಿಎಫ್‌ಐ ಮತ್ತು ಎಸ್‌ಡಿಪಿಐ ವಿರುದ್ಧ ಸಾಕ್ಷಿಗಳು ಇದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಿ..
ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ, 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮೃತನ ಶವಯಾತ್ರೆ ಮಾಡಲು ಅವಕಾಶ ಕಲ್ಪಿಸಿದ್ದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಬಿಜೆಪಿ ಕಾರ್ಯಕರ್ತ ಹರ್ಷ ಅವರ ಕೊಲೆಯಾದದ್ದು ಭಾನುವಾರ. ಆ ದಿನದ ರಾತ್ರಿಯಿಂದಲೇ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗದಲ್ಲಿ 3 ಕೊಲೆಗಳು ನಡೆದಿವೆ. ಶಿವಮೊಗ್ಗ ಗೃಹ ಸಚಿವರ ತವರು ಜಿಲ್ಲೆ, ಅಲ್ಲೇ ಈ ರೀತಿ ಕೊಲೆಗಳು ನಿರಂತರವಾಗಿ ನಡೆಯುತ್ತವೆ ಎಂದರೆ ಹೇಗೆ? ಹಿಂದಿನ ದಿನವೇ 144 ಸೆಕ್ಷನ್ ಜಾರಿಯಾಗಿದ್ದರೂ ಮೃತನ ಶವಯಾತ್ರೆ ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :
ಈ ಶವಯಾತ್ರೆಯಲ್ಲಿ ಸಚಿವ ಈಶ್ವರಪ್ಪ, ಸ್ಥಳೀಯ ಸಂಸದ ರಾಘವೇಂದ್ರ ಕೂಡ ಭಾಗವಹಿಸಿದ್ದರು. ಅಂದರೆ ಈ ಶವಯಾತ್ರೆಯನ್ನು ರಾಜ್ಯ ಸರ್ಕಾರದ ಪ್ರಾಯೋಜಿತ ಶವಯಾತ್ರೆ ಎನ್ನಬೇಕಾಗುತ್ತದೆ. ತಮ್ಮದೇ ಸರ್ಕಾರ 144 ಸೆಕ್ಷನ್ ಹಾಕಿದೆ. ಸರ್ಕಾರದ ಸಚಿವರ ಎದುರೇ ಕಲ್ಲು ತೂರಾಟ ನಡೆದಿದೆ. ಅಂಗಡಿ, ವಾಹನಗಳಿಗೆ ಬೆಂಕಿ ಹಾಕಲಾಗಿದೆ. ಜನ ಗುಂಪು ಗುಂಪಾಗಿ ಕತ್ತಿ, ತಲ್ವಾರ್ ಹಿಡಿದು ಓಡಾಡ್ತಾರೆ. ಈ ಮೆರವಣಿಗೆಯಲ್ಲಿ ಈಶ್ವರಪ್ಪ ಮುಂದೆ ನಿಂತಿದ್ದಾರೆ ಎಂದರೆ ಇದು ನಾಗರಿಕ ಸರ್ಕಾರವೇ? ಇವತ್ತು ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ, ಆಸ್ತಿ ಪಾಸ್ತಿ ನಷ್ಟವಾಗಿದ್ದರೆ ಅದಕ್ಕೆ ಸಚಿವ ಈಶ್ವರಪ್ಪ ಅವರೇ ಹೊಣೆ ಎಂದು ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಈಶ್ವರಪ್ಪ ಅವರದೇ ಪಕ್ಷದ ಸರ್ಕಾರ ಇದೆ. ಪಿಎಫ್‌ಐ ಮತ್ತು ಎಸ್‌ಡಿಪಿಐ ವಿರುದ್ಧ ಸಾಕ್ಷಿಗಳು ಇದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಿ. ನಿಷೇಧ ಮಾಡಬೇಡಿ ಎಂದು ಅವರಿಗೆ ಅಡ್ಡ ಬರುತ್ತಿರುವವರಾದರೂ ಯಾರು ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಹರ್ಷ ಕೊಲೆ ಪ್ರಕರಣವನ್ನು ಎನ್ಐಎಯಿಂದಲೋ ಅಥವಾ ಬೇರೆ ಯಾವ ತನಿಖಾ ಸಂಸ್ಥೆಯ ಮೂಲಕವಾದರೂ ತನಿಖೆ ನಡೆಸಲಿ. ನನ್ನ ತಕರಾರು ಇಲ್ಲ. ನಿನ್ನೆಯ ಶವಯಾತ್ರೆಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಕಷ್ಟು ಜನರ ಮೇಲೆ ಹಲ್ಲೆ, ಕಲ್ಲು ತೂರಾಟ ನಡೆದಿದೆ. ಈ ಎಲ್ಲಾ ಕಾರಣಗಳಿಗಾಗಿ ಒಟ್ಟು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :
